ಮಂಗಳೂರು: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ “ನಿಮ್ಮ ಸಲಹೆ-ನಮ್ಮ ಸಂಕಲ್ಪ” ಸಂಕಲ್ಪ ಪತ್ರ ಅಭಿಯಾನದ ಉದ್ಘಾಟನಾ ಸಮಾರಂಭ ಶುಕ್ರವಾರ ಸಂಜೆ ನಡೆಯಿತು.
ಈ ಕುರಿತು ಮಾತಾಡಿದ ಚುನಾವಣೆ ಪ್ರಣಾಳಿಕೆ ಸಂಚಾಲಕ ಶಾಂತರಾಮ್ ಶೆಟ್ಟಿ ಅವರು, “ಲೋಕಸಭಾ ಚುನಾವಣೆ ಪೂರ್ವಭಾವಿಯಾಗಿ ಜನರ ಬೇಡಿಕೆಗಳನ್ನು ಪರಿಗಣಿಸುವ ನಿಟ್ಟಿನಲ್ಲಿ ಸಂಕಲ್ಪ ಪತ್ರ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ನಮೋ ಆಪ್, ಮಿಸ್ಡ್ ಕಾಲ್ ಮತ್ತು ಸಂಕಲ್ಪ ಪತ್ರ ಮೂಲಕ ಜನರಿಗೆ ಏನು ಬದಲಾವಣೆ ಬೇಕು ಎನ್ನುವುದನ್ನು ತಿಳಿಯಲು ಈ ಯೋಜನೆ ಕೈಗೊಳ್ಳಲಾಗಿದೆ. ಕ್ಷೇತ್ರದ ಮೂಲೆ ಮೂಲೆಯಲ್ಲಿ ಸರಕಾರದ ಯೋಜನೆ, ಸಾಧನೆಯನ್ನು ವಿವರಿಸಲು ಎರಡು ಎಲ್ ಇ ಡಿ ವಾಹನಗಳನ್ನು ಕಳುಹಿಸಲಾಗುವುದು. ಜಿಲ್ಲೆಯಲ್ಲಿ ಶಾಪಿಂಗ್ ಮಾಲ್, ದೇವಸ್ಥಾನ, ಕಾಲೇಜ್ ಇತ್ಯಾದಿ ಜನನಿಬಿಡ ಪ್ರದೇಶಗಳಲ್ಲಿ ಸಂಕಲ್ಪ ಪೆಟ್ಟಿಗೆ ಇರಿಸಲಾಗುವುದು. 2014 ಮತ್ತು 2019ರಲ್ಲಿ ಸಂಕಲ್ಪ ಮಾಡಿದ್ದರಲ್ಲಿ ಶೇ.95 ಈಡೇರಿಸಿದ್ದು ಈ ಬಾರಿಯ ಚುನಾವಣೆಯಲ್ಲಿ ಜನರನ್ನು ತಲುಪಲು ಈ ಅಭಿಯಾನ ಪ್ರಾಮುಖ್ಯವಾಗಿದೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ಖಜಾಂಚಿ ಸಂಜಯ್ ಪ್ರಭು, ಜಿಲ್ಲಾ ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಚುನಾವಣೆ ಪ್ರಣಾಳಿಕೆ ಸಂಚಾಲಕ ಶಾಂತರಾಮ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.