ಸುರತ್ಕಲ್: ಇಲ್ಲಿನ ಎನ್ ಐಟಿಕೆ ಟೋಲ್ ಗೇಟ್ ರದ್ದಾಗಿ ಡಿಸೆಂಬರ್ 1ಕ್ಕೆ ವರ್ಷ ಪೂರ್ತಿಗೊಂಡಿದ್ದು ಈ ಹಿನ್ನೆಲೆಯಲ್ಲಿ ಟೋಲ್ ವಿರೋಧಿ ಹೋರಾಟ ಸಮಿತಿ ಸದಸ್ಯರು ಶುಕ್ರವಾರ ಸಂಜೆ ಟೋಲ್ ಗೇಟ್ ಪರಿಸರದಲ್ಲಿ ಸಂಭ್ರಮಾಚರಣೆ ನಡೆಸಿದರು.
ಈ ವೇಳೆ ಮಾತಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ “ಟೋಲ್ ಅವಶೇಷ ತೆರವು ಮಾಡಿ ಎಂದು ಹೆದ್ದಾರಿ ಇಲಾಖೆಗೆ ಪತ್ರ ಬರೆದರೆ ಟೋಲ್ ತೆರವು ಇನ್ನೂ ಅಧಿಕೃತಗೊಂಡಿಲ್ಲ, ಹೀಗಾಗಿ ತೆರವು ಮಾಡಲಾಗದು ಎಂಬ ಉತ್ತರ ಬರುತ್ತದೆ. ಕೂಡಲೇ ಈ ಹೆದ್ದಾರಿಯನ್ನು ಟೋಲ್ ಮುಕ್ತ ಹೆದ್ದಾರಿ ಎಂಬುದಾಗಿ ಘೋಷಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ” ಎಂದರು.
ಕಾಂಗ್ರೆಸ್ ಮುಖಂಡ ಆರ್. ಪದ್ಮರಾಜ್, ಕೆಪಿಸಿಸಿ ವಕ್ತಾರೆ ಪ್ರತಿಭಾ ಕುಳಾಯಿ, ಮಾಜಿ ಸಚಿವ ಅಭಯಚಂದ್ರ ಜೈನ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ, ಸಾಮಾಜಿಕ ಕಾರ್ಯಕರ್ತ ಎಂ.ಜಿ. ಹೆಗಡೆ, ರಾಘವೇಂದ್ರ ರಾವ್, ಮಾಜಿ ಸಚಿವ ಮೊಯಿದೀನ್ ಬಾವಾ, ಮಂಜುಳಾ ನಾಯಕ್, ರಮೇಶ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.
ಕೊನೆಗೆ ನಾನಾ ಬಗೆಯ ಸಿಹಿತಿಂಡಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಲಾಯಿತು.