“ಭಾಷಣದಿಂದ ಏನನ್ನೂ ಸಾಧಿಸಲಾಗದು, ಕೆಲಸ ಮಾಡಿ ತೋರಿಸಬೇಕು” -ಡಾ.ಎಂ.ಎನ್. ರಾಜೇಂದ್ರ ಕುಮಾರ್

ಪುತ್ತೂರಿನಲ್ಲಿ ಸಹಕಾರಿಗಳ ಜಿಲ್ಲಾಮಟ್ಟದ ಕ್ರೀಡಾಕೂಟ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ (ರಿ.)ಮಂಗಳೂರು ಇದರ ಸಹಭಾಗಿತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಹಾಗೂ ನವೋದಯ ಸ್ವಸಹಾಯ ಸಂಘಗಳ ಸದಸ್ಯರುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟವು ಗುರುವಾರ ಇಲ್ಲಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಜರುಗಿತು.
ಅತಿಥಿಗಳು ಸಹಕಾರಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು, “ದೇಶದ ಇತಿಹಾಸದಲ್ಲಿ ಹಳ್ಳಿಯ ಒಬ್ಬ ಸಾಮಾನ್ಯ ಮಹಿಳೆ ಕೂಡಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬಹುದು ಅನ್ನೋದನ್ನು ಇಂದಿನ ಜಿಲ್ಲಾಮಟ್ಟದ ಕ್ರೀಡಾಕೂಟ ತೋರಿಸಿಕೊಟ್ಟಿದೆ. ಹಳ್ಳಿ ಹಳ್ಳಿಯ ಜನರೂ ಎಸ್ ಸಿಡಿಸಿಸಿ ಬ್ಯಾಂಕ್ ನಿಂದಾಗಿ ಬ್ಯಾಂಕ್ ಮೆಟ್ಟಿಲು ತುಳಿಯುವಂತಾದರೆ ಮಹಿಳೆಯರು ನವೋದಯ ಸ್ವಸಹಾಯ ಗುಂಪುಗಳ ಮೂಲಕ ಸ್ವಾವಲಂಬನೆಯನ್ನು ಸಾಧಿಸಿದರು. ಇದಕ್ಕಾಗಿ ರಾಜೇಂದ್ರ ಕುಮಾರ್ ಅಭಿನಂದನಾರ್ಹರು. ಒಲಿಂಪಿಕ್ ಮಾದರಿಯ ಕ್ರೀಡಾಕೂಟ 15000ಕ್ಕೂ ಹೆಚ್ಚು ಕ್ರೀಡಾಳುಗಳ ಸಮ್ಮುಖದಲ್ಲಿ ನಡೆಯಲಿದೆ. ಪುತ್ತೂರಿನಲ್ಲಿ ಇಂತಹ ಅಭೂತಪೂರ್ವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ” ಎಂದರು.

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿ, “ಇದು ನಿಜಕ್ಕೂ ಅಭೂತಪೂರ್ವ ಕಾರ್ಯಕ್ರಮ. ತಾಯಂದಿರಿಗೆ ಸೊಂದರಿಯರಿಗೆ ಮನೆ, ಕುಟುಂಬ, ಸಂಸಾರ, ಮಕ್ಕಳು ಅಷ್ಟೇ ಪ್ರಪಂಚ ಎಂಬ ಕಾಲವೊಂದಿತ್ತು. ಆದರೆ ರಾಜೇಂದ್ರ ಕುಮಾರ್ ಅವರು ಅಂತ ಹೆಣ್ಮಕ್ಕಳನ್ನು ಇಂದು ಕ್ರೀಡಾ ಸ್ಫೂರ್ತಿಯಿಂದ ಕ್ರೀಡಾಂಗಣಕ್ಕೆ ತಂದು ನಿಲ್ಲಿಸಿದ್ದಾರೆ. ಅವರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ” ಎಂದರು.
ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಮಾತನಾಡಿ, “ಭಾಷಣದಿಂದ ಏನನ್ನೂ ಮಾಡಲು ಸಾಧ್ಯವಿಲ್ಲ, ಕೆಲಸದಿಂದ ಮಾತ್ರ ಏನನ್ನಾದರೂ ಸಾಧಿಸಬಹುದು. ಇದು ನನ್ನೊಬ್ಬನ ಸಾಧನೆ ಖಂಡಿತ ಅಲ್ಲ, ಸಹಕಾರ ಕ್ಷೇತ್ರ ಬೆಳೆಯಲು ಎಲ್ಲರೂ ಕೈಜೋಡಿಸಬೇಕು. ಎಲ್ಲರೂ ಮಹಿಳೆಯರೇ ಮಾತೆಯರೇ ಎನ್ನುತ್ತಾರೆ. ಆದರೆ ಅವರನ್ನು ಸ್ವಾವಲಂಬನೆಗೊಳಿಸಲು ಯಾರೂ ಪ್ರಯತ್ನಿಸುತ್ತಿಲ್ಲ. ಇದಕ್ಕಾಗಿ ನಾವು ಸ್ವಸಹಾಯ ಸಂಘಗಳ ಮೂಲಕ ಹೆಣ್ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡಿದ್ದೇವೆ. ಇಂದು ಹೆಣ್ಮಕ್ಕಳು ಪುರುಷರಿಗೆ ಸಮಾನವಾಗಿ ಬೆಳೆಯುತ್ತಿರುವುದು ಖುಷಿಯ ವಿಚಾರ” ಎಂದರು.
ಮಾತು ಮುಂದುವರಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು, “ಎಸ್ ಸಿಡಿಸಿಸಿ ಬ್ಯಾಂಕ್ 115 ಶಾಖೆಗಳನ್ನು ಗ್ರಾಮೀಣ ವಲಯದಲ್ಲಿ ಸ್ಥಾಪಿಸುವ ಮೂಲಕ ಹಳ್ಳಿಯ ಜನರನ್ನು ಕೂಡಾ ಬ್ಯಾಂಕ್ ವ್ಯವಹಾರಕ್ಕೆ ಪ್ರೇರೇಪಣೆ ನೀಡಿದ್ದಾರೆ. ಡಾ. ರಾಜೇಂದ್ರ ಕುಮಾರ್ ಅವರು ಕೇವಲ ಬ್ಯಾಂಕ್ ವ್ಯವಹಾರ ಮಾತ್ರ ನೋಡಿಲ್ಲ ಬದಲಿಗೆ ಸಾಮಾಜಿಕ ಧಾರ್ಮಿಕ ಚಟುವಟಿಕೆಯಲ್ಲೂ ಮುಂಚೂಣಿಯಲ್ಲಿದ್ದಾರೆ. ಬೆಂಗಳೂರು ಕಂಬಳಕ್ಕೂ ನನಗೆ ಮೊದಲಿಗರಾಗಿ ಸಹಕಾರ ನೀಡಿದವರು ರಾಜೇಂದ್ರ ಕುಮಾರ್ ಅವರು. ಅವರ ಸಮಾಜಪರ ಕಾಳಜಿ ಇದೇ ರೀತಿ ಮುಂದುವರಿಯಲಿ” ಎಂದರು.
ವೇದಿಕೆಯಲ್ಲಿ ಸಚಿವ ಆರ್.ಬಿ. ತಿಮ್ಮಾಪುರ, ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೆ., ಮಾಜಿ ಶಾಸಕ ಸಂಜೀವ ಮಠಂದೂರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಕಾವು ಹೇಮನಾಥ್ ಶೆಟ್ಟಿ, ಅಪೆಕ್ಸ್ ಬ್ಯಾಂಕ್ ಜಿ.ಎಂ. ನಾಗಣ್ಣ, ಕೆ. ಸೀತಾರಾಮ್ ರೈ, ಜೀವಂಧರ್ ಜೈನ್, ಮಾಜಿ ರಾಜ್ಯಸಭಾ ಸದಸ್ಯ ಇಬ್ರಾಹಿಂ, ಎಸ್ ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರಾದ ಬಿ. ನಿರಂಜನ್, ಟಿ.ಜಿ. ರಾಜಾರಾಮ್ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಶಶಿಕುಮಾರ್ ರೈ ಬಿ. ಮತ್ತಿತರರು ಉಪಸ್ಥಿತರಿದ್ದರು.
ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ. ಧನ್ಯವಾದ ಸಮರ್ಪಿಸಿದರು.

error: Content is protected !!