ಸುರತ್ಕಲ್: ಝೆನ್ ಜಿಮ್ ಸುರತ್ಕಲ್ ಹಾಗೂ ದ.ಕ. ಅಶೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಮಂಗಳೂರು ಜಂಟಿ ಆಶ್ರಯದಲ್ಲಿ ಮಿ. ದಕ್ಷಿಣ ಕನ್ನಡ 2023 ದೇಹದಾರ್ಡ್ಯ ಸ್ಪರ್ಧೆಯು ಡಿಸೆಂಬರ್ 9ರಂದು ನಡೆಯಲಿದ್ದು ಇದರ ಪ್ರಯುಕ್ತ ಟಿ ಶರ್ಟ್ ಹಾಗೂ ಲೋಗೋ ಅನಾವರಣ ಕಾರ್ಯಕ್ರಮ ಗುರುವಾರ ಸಂಜೆ ಸುರತ್ಕಲ್ ನ ಕರ್ನಾಟಕ ಸೇವಾ ವೃಂದದಲ್ಲಿ ಜರುಗಿತು.
ಕರ್ನಾಟಕ ಸೇವಾ ವೃಂದದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಮಾತನಾಡಿ, “ಇಂದಿನ ಕಾಲದಲ್ಲಿ ನಮ್ಮ ದೇಹಕ್ಕೆ ವ್ಯಾಯಾಮ ಎನ್ನುವುದು ಅತ್ಯವಶ್ಯ. ಹೀಗಾಗಿ ಇಂತಹ ಕಾರ್ಯಕ್ರಮಕ್ಕೆ ಎಲ್ಲರೂ ತುಂಬು ಮನಸ್ಸಿನಿಂದ ಸಹಕಾರ ನೀಡಬೇಕು. ಸಮಾಜಮುಖಿ ಯೋಚನೆಯಿಂದ ನಡೆಯಲ್ಪಡುವ ಕಾರ್ಯಕ್ರಮಕ್ಕೆ ಶುಭವಾಗಲಿ. ನಾವೆಲ್ಲರೂ ಸೇರಿ ಇದನ್ನು ಯಶಸ್ವಿಗೊಳಿಸೋಣ” ಎಂದರು.
ಬಳಿಕ ಮಾತಾಡಿದ ಓಂ ಪ್ರಕಾಶ್ ಶೆಟ್ಟಿಗಾರ್ ಅವರು, “ಝೆನ್ ಜಿಮ್ ಸಂಸ್ಥೆಯ 23 ವರ್ಷದ ಸಂಭ್ರಮದಲ್ಲಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ಖುಷಿಯ ವಿಚಾರ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು. ಸಂಘಟನೆಯು ಬರೀ ಸ್ಪರ್ಧೆಯನ್ನು ಮಾತ್ರವಲ್ಲದೆ ಸಮಾಜಮುಖಿ ಚಿಂತನೆಯಿಂದ ಬಹಳಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಇದಕ್ಕಾಗಿ ಅಭಿನಂದನೆಗಳು” ಎಂದರು.
ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಪುಂಡಲೀಕ ಹೊಸಬೆಟ್ಟು ಅವರು, “ಸ್ಪರ್ಧಾ ಕೂಟದಲ್ಲಿ 150ಕ್ಕೂ ಅಧಿಕ ಮಂದಿ ಪಾಲು ಪಡೆಯಲಿದ್ದಾರೆ, ವಿಶೇಷವಾಗಿ ವಿಕಲ ಚೇತನ ಕ್ರೀಡಾಪಟುಗಳೂ ಭಾಗವಹಿಸಲಿದ್ದಾರೆ. ಅಲ್ಲದೆ ಸಾಧನೆ ತೋರಿದ ಕ್ರೀಡಾಪಟುಗಳನ್ನು ಗೌರವಿಸಲಿದ್ದು ಕೇವಲ ಸ್ಪರ್ಧಾ
ವೇದಿಕೆಯಾಗಬಾರದು ಎನ್ನುವ ಯೋಚನೆಯಲ್ಲಿ ಅಶಕ್ತರಿಗೆ ವೈದ್ಯಕೀಯ ನೆರವು, ಅವಶ್ಯಕತೆಯುಳ್ಳ
ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಬಡಕುಟುಂಬಕ್ಕೆ ಅಕ್ಕಿ ವಿತರಣೆ ಮತ್ತಿತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸೀನಿಯರ್ ವಿಭಾಗದಲ್ಲಿ 7, ಮಾಸ್ಟರ್ ವಿಭಾಗದಲ್ಲಿ 3, ವಿಕಲಚೇತನ ವಿಭಾಗದಲ್ಲಿ 1 ಹೀಗೆ ಒಟ್ಟು 11 ವಿಭಾಗದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪ್ರತಿ ವರ್ಗದಲ್ಲಿ ವಿಜೇತರಾಗುವ ವರಿಗೆ ತಲಾ 15 ಸಾವಿರ ನಗದು ಬಹುಮಾನ ನೀಡಲಾಗುತ್ತದೆ” ಎಂದು ಹೇಳಿದರು.
ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಪುಂಡಲೀಕ ಹೊಸಬೆಟ್ಟು, ಗೌರವಾಧ್ಯಕ್ಷ ಪ್ರೇಮಾನಾಥ್ ಉಳ್ಳಾಲ್, ಇಡ್ಯಾ ವಿದ್ಯಾಧರ್ ರಾವ್, ಪ್ರಧಾನ ಕಾರ್ಯದರ್ಶಿ ಅಶೋಕ್ ಎನ್ಎಂ ಪಿಎ, ಸುರೇಶ್ಚಂದ್ರ ಶೆಟ್ಟಿ, ನಾಗೇಶ್ ಶೆಟ್ಟಿ, ಉಪಾಧ್ಯಕ್ಷರಾದ ಜೋಸೆಫ್ ಡಿಸೋಜ, ಎಂಸಿಎಫ್ ನಿವೃತ್ತ ಅಧಿಕಾರಿ ಶ್ರೀಕಾಂತ್ ಪಿ., ಕಿಶನ್ ರಾವ್, ಹರೀಶ್ ಕುಮಾರ್, ಕೇಶವ ಎನ್. ಕುಳಾಯಿ, ಓಂ ಪ್ರಕಾಶ್ ಶೆಟ್ಟಿಗಾರ್, ಪ್ರವೀಣ್, ಸಾಯಿ ಪೃಥ್ವಿ ಮತ್ತಿತರರು ಉಪಸ್ಥಿತರಿದ್ದರು.
ಪುಂಡಲೀಕ ಹೊಸಬೆಟ್ಟು ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.