“ಕೆಸರುಗದ್ದೆ ಕ್ರೀಡೋತ್ಸವ ಕೃಷಿ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಪ್ರೇರಣೆ”

ಮುಲ್ಕಿ: ಶಿಮಂತೂರು ಯುವಕ ಮಂಡಲ ಆಶ್ರಯದಲ್ಲಿ ಭಾನುವಾರದಂದು ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದ ಬಳಿ ತೃತೀಯ ವರ್ಷದ ಕೆಸರ್ ಡೊಂಜಿ ದಿನ ನಡೆಯಿತು.
ದೇವಸ್ಥಾನದ ಅರ್ಚಕ ಪುರುಷೋತ್ತಮ ಭಟ್ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಮುಖ್ಯ ಅತಿಥಿಗಳಾಗಿ ಜ್ಯೋತಿಷಿ ವಿಷ್ಣುಮೂರ್ತಿ ಭಟ್ ಮಾತನಾಡಿ ಕೆಸರ್ ಡೊಂಜಿ ಕಾರ್ಯಕ್ರಮದ ಮೂಲಕ ಯುವ ಜನಾಂಗಕ್ಕೆ ಕೃಷಿಗೆ ಪ್ರೋತ್ಸಾಹ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಪ್ರೇರಣೆ ಹಾಗೂ ಪ್ರಕೃತಿ ಸಂರಕ್ಷಣೆ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅತಿಕಾರಿಬೆಟ್ಟು ಗ್ರಾ.ಪಂ.ಅಧ್ಯಕ್ಷ ಮನೋಹರ ಕೋಟ್ಯಾನ್ ವಹಿಸಿ ಮಾತನಾಡಿ ಆಧುನಿಕ ಕೃಷಿ ಪದ್ಧತಿಯಲ್ಲಿ ಹಿಂದಿನ ಕಾಲದ ಕೃಷಿ ಪರಂಪರೆ ಮಾಯವಾಗುತ್ತಿದ್ದು ಉಳಿಸಿ ಬೆಳೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಯುವಕಮಂಡಲದ ವತಿಯಿಂದ ಕೃಷಿಗೆ ಪೂರಕವಾಗಿ ನಡೆಯುತ್ತಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶಶಿಕಲಾ , ಮುಲ್ಕಿ ಶಾಂಭವಿ ಜೆ ಸಿ ಐ ಅಧ್ಯಕ್ಷ ಅನಿಲ್ ಕೊಲಕಾಡಿ, ಶಿಮಂತೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಕಾರ್ಯದರ್ಶಿ ಮಮತಾ ಅನಿಲ್ ಶೆಟ್ಟಿ,ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯೆ ಶಶಿಕಲಾ,ಯುವಕ ಮಂಡಲದ ಅಧ್ಯಕ್ಷ ಕಿಶೋರ್ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್, ಮತ್ತಿತರರು ಉಪಸ್ಥಿತರಿದ್ದರು.ರಾಹುಲ್ ಶೆಟ್ಟಿ ಸ್ವಾಗತಿಸಿದರು,ಅರ್ಪಿತಾ ಶೆಟ್ಟಿ ನಿರೂಪಿಸಿದರು. ಗೋಪಾಲ್ ಶಿಮಂತೂರು ಧನ್ಯವಾದ ಅರ್ಪಿಸಿದರು.
ವೇದಿಕೆಯಲ್ಲಿ ಸಾಧಕರ ನೆಲೆಯಲ್ಲಿ ಹಿರಿಯ ಪ್ರಗತಿಪರ ಕೃಷಿಕರಾದ ಸಂಜೀವ ಶೆಟ್ಟಿ, ಬಾಲಕೃಷ್ಣ ಎಸ್ ಶೆಟ್ಟಿ, ಗಂಗಾ ದೇವಾಡಿಗ ರವರನ್ನು ಗೌರವಿಸಲಾಯಿತು.
ಬಳಿಕ ಕಂಬಳದ ಕೋಣಗಳನ್ನು ಕೆಸರುಗದ್ದೆಯಲ್ಲಿ ಓಡಿಸುವ ಮೂಲಕ ಜಾನಪದ ಶೈಲಿಯಲ್ಲಿ ಕೆಸರ್ ಡೊಂಜಿ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕ್ರೀಡಾಕೂಟ ನಡೆಯಿತು. ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.

error: Content is protected !!