“ಸಮೃದ್ಧ ನಾಳೆಗಾಗಿ ಇನಾಯತ್ ಅಲಿ ಅವರನ್ನು ಬೆಂಬಲಿಸಿ” -ಅಶೋಕ್ ಗೆಹ್ಲೊಟ್

ಸುರತ್ಕಲ್ ನಲ್ಲಿ “ಕೈ” ಅಭ್ಯರ್ಥಿ ಅಲಿ ಭರ್ಜರಿ ರೋಡ್ ಶೋ!!
ಸುರತ್ಕಲ್: “ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರದ ಚುಕ್ಕಾಣಿ ಪಡೆಯಲಿದೆ. ಇನಾಯತ್ ಅಲಿ ಅವರಂತಹ ಸಮರ್ಥ ಅಭ್ಯರ್ಥಿಯನ್ನು ಪಕ್ಷವು ಕಣಕ್ಕಿಳಿಸಿದೆ. ಮತದಾರ ಬಾಂಧವರು ಜಾತಿ ಮತ ಬೇಧ ಮರೆತು ಎಲ್ಲರನ್ನೂ ಸಮಾನವಾಗಿ ಕಾಣುವ ಇನಾಯತ್ ಅಲಿ ಅವರನ್ನು ಬೆಂಬಲಿಸಿ” ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಅವರು ಸುರತ್ಕಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿಯವರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತಾಡಿದರು.
“ಕಾಂಗ್ರೆಸ್ ಪಕ್ಷಕ್ಕೆ ಅದರದ್ದೇ ಆದ ಇತಿಹಾಸವಿದೆ. ಎಲ್ಲರನ್ನೂ ಸಮಾನವಾಗಿ ಕಾಣುವ ಕಾಂಗ್ರೆಸ್ ಪಕ್ಷ ಧರ್ಮಗಳ ನಡುವೆ ಕಂದಕ ಸೃಷ್ಟಿಸಿಲ್ಲ. ಜನರನ್ನು ಮತೀಯವಾಗಿ ವಿಂಗಡಿಸಿಲ್ಲ. ಹೀಗಾಗಿ ಶಾಂತಿ ಮತ್ತು ಸಹಬಾಳ್ವೆಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇನಾಯತ್ ಅಲಿ ಅವರಿಗೆ ನೀವು ಮತ ನೀಡಿ” ಎಂದು ಕರೆ ನೀಡಿದರು.


ಬಳಿಕ ಮಾತಾಡಿದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರು, “ನಾನು ಬಾಲ್ಯದಲ್ಲಿ ಕಷ್ಟಪಟ್ಟು ಕಲಿತು ಎನ್ ಎಸ್ ಯು ಐ ಮೂಲಕ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟೆ. ಆಸ್ಕರ್ ಫೆರ್ನಾಂಡಿಸ್ ಹಾಗೂ ಜನಾರ್ಧನ ಪೂಜಾರಿ ನನ್ನ ಗುರುಗಳು. ನನ್ನ ವಿರುದ್ಧ ಇಂದು ಬಿಜೆಪಿ ಜೊತೆಗೆ ಕೈಜೋಡಿಸಿದ ಕೆಲವರಿಂದ ಷಡ್ಯಂತ್ರ ನಡೆಯುತ್ತಿದೆ. ಶ್ರೀಮಂತ ಉದ್ಯಮಿಗಳ ಜೊತೆ ಸೇರಿಕೊಂಡು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಹಣ ಕೊಟ್ಟು ಟಿಕೆಟ್ ತಗೊಂಡು ಬಂದಿದ್ದಾಗಿ ಹೇಳುತ್ತಾರೆ. ಹಾಗೊಂದು ವೇಳೆ ನಿಜವೇ ಆದಲ್ಲಿ ಪುರಾವೆಯನ್ನು ಬಹಿರಂಗಪಡಿಸಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ” ಎಂದರು.


“ಬಿಜೆಪಿ ಅಭ್ಯರ್ಥಿ ನನ್ನನ್ನು ನೇರವಾಗಿ ಎದುರಿಸಲಾಗದೆ ಜೆಡಿಎಸ್ ಅಭ್ಯರ್ಥಿಯನ್ನು ನನ್ನ ವಿರುದ್ಧ ಬಿಟ್ಟಿದೆ. ನಾನು ಪದವಿ ಅಥವಾ ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ. ಜನರ ಸೇವೆ ಮಾಡಲು ಇಲ್ಲಿಗೆ ಬಂದಿದ್ದೇನೆ. ಹೀಗಾಗಿ ಅಪಪ್ರಚಾರದ ಬಗ್ಗೆ ಏನೂ ಹೇಳುವುದಿಲ್ಲ. ಇಲ್ಲಿ ಸೇರಿರುವ ನನ್ನ ಕಾರ್ಯಕರ್ತರೇ ತೀರ್ಮಾನಿಸುತ್ತಾರೆ” ಎಂದರು.


ರಮೇಶ್ ಚೆನ್ನಿತ್ತಲ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಗುರುಪುರ ಬ್ಲಾಕ್ ಅಧ್ಯಕ್ಷ ಸುರೇಂದ್ರ ಕಂಬಳಿ, ಸುರತ್ಕಲ್ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಹಮ್ಮದ್ ಸಮೀರ್ ಕಾಟಿಪಳ್ಳ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕವಿತಾ ಸನಿಲ್, ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ, ಸುರತ್ಕಲ್ ಬ್ಲಾಕ್ ಅಧ್ಯಕ್ಷ ಉಮೇಶ್ ದಂಡೆಕೇರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಕಾನ ಕ್ರಾಸ್ ನಿಂದ ರೋಡ್ ಶೋ ನಡೆಯಿತು. ಸಹಸ್ರಾರು ಮಂದಿ ಕಾರ್ಯಕರ್ತರು, ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

error: Content is protected !!