ಸುರತ್ಕಲ್: “ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡಲಾಯಿತು. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು ಹಿಂದಿನ ಶಾಸಕ ಮೊಯಿದೀನ್ ಬಾವಾ ಅವರ ಅವಧಿಯಲ್ಲಿ. ಅವರಿಗೆ ಕಾಂಗ್ರೆಸ್ ಪಕ್ಷದ ನಾಯಕರು ಮೋಸದಿಂದ ಟಿಕೆಟ್ ಸಿಗುವುದನ್ನು ತಪ್ಪಿಸಿದರು. ನಾವು ಅವರಲ್ಲಿ ಧೈರ್ಯ ತುಂಬಿ ಜೆಡಿಎಸ್ ನಿಂದ ಟಿಕೆಟ್ ನೀಡಿದ್ದೇವೆ. ಬಾವಾ ಮಾಡಿರುವ ಅಭಿವೃದ್ಧಿ, ತ್ಯಾಗಕ್ಕೆ ಈ ಬಾರಿ ಮತದಾರರು ಕೈ ಹಿಡಿಯಲಿದ್ದಾರೆ” ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ಜೆಡಿಎಸ್ ಸರಕಾರದ ಅವಧಿಯಲ್ಲಿ ಮಹಿಳೆಯರಿಗೆ ಸ್ವಾವಲಂಬನೆ ಸಿಕ್ಕಿತು, ರೈತರ ಸಾಲ ಮನ್ನಾ ಆಗಿ ನೆಮ್ಮದಿಯ ಜೀವನ ಸಿಕ್ಕಿತು, ರಾಜ್ಯದಲ್ಲಿ ಶಾಂತಿ ನೆಮ್ಮದಿಯಿಂದ ಜನರು ಜೀವಿಸುವಂತಾಯಿತು. ಬಾವಾ ಅವರು ಮೂರನೇ ನಂಬರ್ ನಲ್ಲಿ ಇದ್ದಾರೆ. ಭತ್ತದ ತೆನೆ ಹೊತ್ತ ಅನ್ನಪೂರ್ಣೇಶ್ವರಿಯ ಚಿಹ್ನೆ ಅವರದ್ದಾಗಿದೆ. ಮೇ 10ರಂದು ಸಂಜೆ 5 ಗಂಟೆಯ ವರೆಗೆ ಕಾಲಾವಕಾಶ ಇದೆ, ನಾನು ಕೈಮುಗಿದು ಬೇಡಿಕೊಳ್ಳುತ್ತಿದ್ದೇನೆ. ಅವರಿಗೆ ಮತ ಕೊಟ್ಟು ಹರಸಿ. ಜನರಿಗೆ ಬಾವಾ ಮೇಲೆ ವಿಶ್ವಾಸವಿದ್ದು ಅವರು ಮತ ಕೊಟ್ಟು ಗೆಲ್ಲಿಸಲಿದ್ದಾರೆ” ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳಾದ ಮೊಯಿದೀನ್ ಬಾವಾ, ಡಾ.ಅಮರಶ್ರೀ, ಸುಮತಿ ಹೆಗ್ಡೆ, ಯುವಜನತಾದಳದ ಅಕ್ಷಿತ್ ಸುವರ್ಣ, ಜಿಲ್ಲಾಧ್ಯಕ್ಷ ಎಂಬಿ ಸದಾಶಿವ, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮತ್ತಿತರರು ಉಪಸ್ಥಿತರಿದ್ದರು.