“ಮಂಗಳೂರು ಉತ್ತರ ಕ್ಷೇತ್ರದ ಹಾಲಿ ಶಾಸಕರು ಜನರ ದಾರಿ ತಪ್ಪಿಸುತ್ತಿದ್ದಾರೆ” -ಕಾಂಗ್ರೆಸ್ ಆರೋಪ

ಸುರತ್ಕಲ್: “ಮಂಗಳೂರು ಉತ್ತರ ಕ್ಷೇತ್ರದ ಹಾಲಿ ಶಾಸಕರು ಜನರಲ್ಲಿ ಗೊಂದಲವನ್ನು ಸೃಷ್ಟಿಸಿ ದಾರಿ ತಪ್ಪಿಸಿದ್ದಾರೆ. ಹಿಂದೂ ಮುಸ್ಲಿಮರ ಮಧ್ಯೆ ಇದ್ದ ಸೌಹಾರ್ದತೆಯನ್ನು ಹಾಳು ಮಾಡಿದ್ದೇ ಅವರ ಸಾಧನೆ. ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅರ್ಧ ನಿರ್ಮಾಣವಾಗಿದ್ದ ಮಾರುಕಟ್ಟೆಯನ್ನು ಅವರು ರಾಜಕೀಯ ದುರುದ್ದೇಶದಿಂದ ಪೂರ್ತಿಗೊಳಿಸಿಲ್ಲ” ಎಂದು ಮಾಜಿ ಮೇಯರ್ ಮಹಾಬಲ ಮಾರ್ಲ ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದರು.
“ಸಾರ್ವಜನಿಕರಿಗೆ ಬೇಕಾಗಿ ಅವರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಸಲುವಾಗಿ ಅವರು ಪ್ರತಿಭಟನೆ, ಧರಣಿ ನಡೆಸಿದ್ದ ಉದಾಹರಣೆ ಇದೆಯಾ? ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅದೆಷ್ಟೋ ಕೈಗಾರಿಕೆ, ಕಂಪೆನಿಗಳಿವೆ. ಅವುಗಳಲ್ಲಿ ಸ್ಥಳೀಯ ವಿದ್ಯಾವಂತ ಯುವಕ ಯುವತಿಯರಿಗೆ ಉದ್ಯೋಗ ಕೊಡಿಸಲು ಭರತ್ ಶೆಟ್ಟಿ ಪ್ರಯತ್ನ ಪಟ್ಟಿದ್ದಾರೆಯೇ?
ವಿಧಾನಸಭೆಯಲ್ಲಿ ಈ ಬಗ್ಗೆ ಚಕಾರವೆತ್ತಿಲ್ಲ. ಜನರಿಗೆ ಬೇಕಾದ ವಿಚಾರಗಳ ಬಗ್ಗೆ ಮಾತಾಡುವುದು ಬಿಟ್ಟು ಕೋಮು ದ್ವೇಷ ಹರಡುತ್ತಿದ್ದಾರೆ.
ಕಾಂಗ್ರೆಸ್ ನಲ್ಲಿ ಜಾತಿ ಧರ್ಮ ನೋಡಲ್ಲ, ಸಮಾಜಘಾತುಕ ಶಕ್ತಿಗಳನ್ನು ದೂರಾವಿಡುವುದೇ ನಮ್ಮ ಧ್ಯೇಯ. ನಮ್ಮ ಅಭ್ಯರ್ಥಿ ಇನಾಯತ್ ಅಲಿ ಅವರು ನಮ್ಮ ಪಕ್ಷದ ಸಿದ್ಧಾಂತಕ್ಕೆ ನೂರಕ್ಕೆ ನೂರರಷ್ಟು ಬದ್ಧರಾಗಿದ್ದು ಅವರಿಗೆ ಜನತೆ ಮತಕೊಟ್ಟು ಹರಸಬೇಕು” ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಮಹಾಬಲ ಮಾರ್ಲ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡೆಕೇರಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಘವೇಂದ್ರ ರಾವ್, ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಹಮ್ಮದ್ ಸಮೀರ್ ಕಾಟಿಪಳ್ಳ, ಮಲ್ಲಿಕಾರ್ಜುನ, ಅನಿಲ್ ಕುಮಾರ್, ಸ್ಟಾನಿ ಅಲ್ವರಿಸ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!