ಸುರತ್ಕಲ್: “ಬಾವಾ ಅವಧಿಯಲ್ಲಿ ಸುರತ್ಕಲ್ ಮಾರುಕಟ್ಟೆಗೆ 20 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ತಿಗೊಂಡಿತ್ತು. ಆದರೆ ನಂತರ ಭರತ್ ಶೆಟ್ಟಿ ಅವರು ಶಾಸಕರಾಗಿದ್ದು ಮಾರುಕಟ್ಟೆ ಕಾಮಗಾರಿ ಯಾಕೆ ಇನ್ನೂ ಪೂರ್ತಿಯಾಗಿಲ್ಲ? ಮೈದಾನದಲ್ಲಿ ಮಾರುಕಟ್ಟೆ ವ್ಯಾಪಾರಿಗಳಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿತ್ತು. ವ್ಯಾಪಾರಿಗಳು ಇದರ ವಿರುದ್ಧ ಕೋರ್ಟ್ ಗೆ ಹೋಗಿದ್ದಾರೆ. ಈಗ ಕಾಮಗಾರಿ ಸಂಪೂರ್ಣ ನಿಂತಿದ್ದು ಇದು ಹಾಲಿ ಶಾಸಕರಾಗಿದ್ದ ಭರತ್ ಶೆಟ್ಟಿ ಅವರಿಗೆ ತಿಳಿದಿದೆಯೇ? ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು ಶಾಸಕರು ಕೂಡಲೇ ಅದಕ್ಕೆ ಉತ್ತರ ಕೊಡಬೇಕು. ಸುರತ್ಕಲ್ ಜಂಕ್ಷನ್ ನಲ್ಲಿ 5 ಕೋಟಿಯ ಸರ್ಕಲ್ ನಿರ್ಮಾಣ ಮಾಡುವುದಾಗಿ ಹೇಳುತ್ತಾರೆ. ಆದರೆ ಅದಕ್ಕೆ 5 ಕೋಟಿ ಬೇಕಾ? ಮಳಲಿ ಮಸೀದಿ ಹಿಂದೆ ದೇವಸ್ಥಾನವಾಗಿತ್ತು ಎಂದು ಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ. ಮಾತೆತ್ತಿದರೆ ಕೋಮು ದ್ವೇಷದ ಭಾಷಣ ಮಾಡುವ ಭರತ್ ಶೆಟ್ಟಿ ಅವರು ಇದರಿಂದ ಸಾಧಿಸಿದ್ದೇನು? ಹಿಂದೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಆಗಿದ್ದು ಇದನ್ನು ಬಿಜೆಪಿಯವರು ಅಂದಿನ ಎಂ ಎಲ್ ಎ ಈಗಿನ ಜೆಡಿಎಸ್ ಅಭ್ಯರ್ಥಿ ಮೊಯಿದೀನ್ ಬಾವಾರ ತಲೆಗೆ ಕಟ್ಟಿದ್ದರು. ಇದನ್ನು ಬಾವಾ ಮರೆತಿದ್ದಾರೆಯೇ?” ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ರಾವ್ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
“ಮೊಯಿದೀನ್ ಬಾವಾ ಅವಧಿಯಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳನ್ನು ಈಗ ನನ್ನದು ಎನ್ನುತ್ತಿರುವ ಮೊಯಿದೀನ್ ಬಾವಾ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಯಾಕೆಂದರೆ ಕಾಂಗ್ರೆಸ್ ಸರಕಾರದ ಅನುದಾನದಲ್ಲಿ ನಡೆದಿರುವ ಕಾಮಗಾರಿಗಳನ್ನು ತನ್ನದೆನ್ನುತ್ತಿರುವ ಬಾವಾ ಹೇಳಿಕೆ ದುರದೃಷ್ಟಕರ” ಎಂದು ಬಾವಾ ವಿರುದ್ಧ ಕಿಡಿಕಾರಿದರು.
ಬಳಿಕ ಮಾತಾಡಿದ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ ಅವರು, “ಮೊಯಿದೀನ್ ಬಾವಾ 10 ಜನ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದರು. ಆಗ ಯಾರಿಗೆ ಟಿಕೆಟ್ ಕೊಟ್ಟಿದ್ದರೂ ನಾನು ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎನ್ನುತ್ತಿದ್ದರು. ಆದರೆ ಈಗ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮಾತಾಡುತ್ತಿರುವ ಬಾವಾ ಕಾಂಗ್ರೆಸ್ ನಿಂದ ಟಿಕೆಟ್ ತಂದಿದ್ದೇನೆ ಎಂದು ಏರ್ ಪೋರ್ಟ್ ಗೆ ಜನರನ್ನು ಕರೆಸಿ ಜೆಡಿಎಸ್ ಟಿಕೆಟ್ ಮರೆಮಾಚಿ ಮೋಸ ಮಾಡಿದ್ದಾರೆ. ಓರ್ವ ಉದ್ಯಮಿಯಾಗಿ ಸಮಾಜಸೇವೆಯಲ್ಲಿ ಅವಿರತವಾಗಿ ತೊಡಗಿಕೊಂಡಿರುವ ಇನಾಯತ್ ಅಲಿ ಓರ್ವ ಸಜ್ಜನ, ಪ್ರಾಮಾಣಿಕ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ಪ್ರಚಾರಕ್ಕೆ ಹೋದಾಗ ಜನರು ಮುಗಿಬಿದ್ದು ಬರುತ್ತಿದ್ದಾರೆ” ಎಂದರು.
ಬ್ಲಾಕ್ ಅಧ್ಯಕ್ಷ ಉಮೇಶ್ ದಂಡೆಕೇರಿ ಮಾತನಾಡಿ, “ನಾವು ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಕೆಪಿಸಿಸಿ ನೀಡಿರುವ 5 ಗ್ಯಾರಂಟಿಗಳಿಗೆ ಜನರಿಗೆ ಬೆಂಬಲ ಸೂಚಿಸುತ್ತಿದ್ದು ಇನಾಯತ್ ಅಲಿ ಅವರಂತಹ ಯೋಗ್ಯ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ” ಎಂದರು.
ಮಾಜಿ ಶಾಸಕ ಮೊಯಿದೀನ್ ಬಾವಾ ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದಾಗ, “ಮೊಯಿದೀನ್ ಬಾವಾ ಅವರು ಹೆಚ್ಚೆಂದರೆ ಒಟ್ಟು 2 ಸಾವಿರ ಮತಗಳು ಬೀಳಬಹುದು ಅಷ್ಟೇ. ಜೆಡಿಎಸ್ ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತಬ್ಯಾಂಕ್ ಇಲ್ಲ. ಅವರಿಗೆ ವೈಯಕ್ತಿಕ ವರ್ಚಸ್ಸು ಇರಬಹುದು. ಆದರೆ ಅದು ಮತಗಳಾಗಿ ಪರಿವರ್ತನೆಯಾಗುವುದು ಅಸಾಧ್ಯ” ಎಂದು ಹೇಳಿದರು.
ಶಿಬಾ ರಾಮಚಂದ್ರ ಮಾತಾಡಿ, “ಇನಾಯತ್ ಅಲಿ ಅವರು ಸಮಾಜಮುಖಿ ಚಿಂತನೆ ಮತ್ತು ಕಾರ್ಯಗಳಿಂದ ಹೆಸರು ಪಡೆದವರು. ಮಂಗಳೂರು ಉತ್ತರ ಕ್ಷೇತ್ರಕ್ಕೆ ಓರ್ವ ಸಮರ್ಥ ಅಭ್ಯರ್ಥಿಯನ್ನು ಪಕ್ಷ ನೀಡಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಪರಸ್ಪರ ವೈಮನಸ್ಸು ಮರೆತು ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಿ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡೆಕೇರಿ, ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ, ಶಶಿಕಲಾ ಪದ್ಮನಾಭ, ಕೇರಳ ಮಹಿಳಾ ಕಾಂಗ್ರೆಸ್ ಜನರಲ್ ಸೇಕ್ರೆಟರಿ ಶಿಬಾ ರಾಮಚಂದ್ರನ್ , ರಾಘವೇಂದ್ರ ರಾವ್, ರಾಜೇಶ್ ಪೂಜಾರಿ ಕುಳಾಯಿ, ಜಲೀಲ್ ಬದ್ರಿಯಾ ಮತ್ತಿತರರು ಉಪಸ್ಥಿತರಿದ್ದರು.