ಇನಾಯತ್ ಅಲಿ ಸಮ್ಮುಖದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
ಸುರತ್ಕಲ್: “ಜನರು ಕೋವಿಡ್ ಬಳಿಕ ಬೆಲೆ ಏರಿಕೆಯಿಂದ ತತ್ತರಿಸಿಹೋಗಿದ್ದಾರೆ. ಅದೆಷ್ಟೋ ವಿದ್ಯಾವಂತ ಯುವಜನತೆ ಉದ್ಯೋಗ ಕಳೆದುಕೊಂಡಿದ್ದಾರೆ. ಬಿಜೆಪಿಯವರು ತಮ್ಮದು ಡಬಲ್ ಇಂಜಿನ್ ಸರಕಾರ ಅಂತ ಹೇಳ್ತಾರೆ. ಆದರೆ ಅದರ ಇಂಜಿನ್ ಮಾತ್ರ ಇಲ್ಲಿದೆ, ಬೋಗಿ ದೂರದ ಯುಪಿ, ಗುಜರಾತ್ ಕಡೆಗೆ ಹೊರಟುಹೋಗಿದೆ. ಅಭಿವೃದ್ಧಿ ಮಾಡುವುದನ್ನು ಬಿಟ್ಟು ಸಮಾಜದಲ್ಲಿ ಜಾತಿ ಮತಗಳ ಮಧ್ಯೆ ಹುಳಿ ಹಿಂಡುವ ಕೆಲಸವನ್ನು ಬಿಜೆಪಿ ನಾಯಕರು ಮಾಡಿದ್ದಾರೆ. ಈ ಬಾರಿ ಜನರು ಬಿಜೆಪಿ ಸರಕಾರದಿಂದ ಭ್ರಮ ನಿರಸನಗೊಂಡು ಕಾಂಗ್ರೆಸ್ ಕೈಹಿಡಿಯಲಿದ್ದಾರೆ. ಈ ಮೂಲಕ ಸುಭದ್ರ ಸರಕಾರ ರಚನೆಯಾಗಲಿದೆ” ಎಂದು ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಹೇಳಿದರು.
ಅವರು ಕಾವೂರು ಸಮೀಪದ ಶಾಂತಿನಗರದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡುತ್ತಿದ್ದರು.
ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮಾತಾಡಿ, “ಇನಾಯತ್ ಅಲಿ ಅವರು ವಿದ್ಯಾರ್ಥಿ ಜೀವನದಲ್ಲಿ ಎನ್ ಎಸ್ ಯು ಐ ಮೂಲಕ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಇಂದು ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಯುವಕರಾದ ನೀವೆಲ್ಲರೂ ಬೆಂಬಲ ನೀಡುವ ಮೂಲಕ ಗೆಲುವಿಗೆ ಸಹಕರಿಸಬೇಕು. ಯುವ ಕಾಂಗ್ರೆಸ್ ಮುಖಂಡ ಉತ್ತಮ್ ಆಳ್ವರು ಈ ಭಾಗದಲ್ಲಿ ಹತ್ತಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಅವರ ಮುಂದಾಳತ್ವದಲ್ಲಿ ಪಕ್ಷದ ಯುವ ಕಾರ್ಯಕರ್ತರು ಅಭ್ಯರ್ಥಿ ಪರ ಪ್ರಚಾರ ನಡೆಸಿ” ಎಂದರು.
ಉಮೇಶ್ ದಂಡೆಕೇರಿ ಮಾತಾಡಿ, “ಇನಾಯತ್ ಅಲಿ ಅವರು ಬಲಕೈಯಲ್ಲಿ ಮಾಡಿರುವ ದಾನ ಎಡಕೈಗೆ ತಿಳಿಯಬಾರದು ಎಂದು ಯೋಚಿಸುವ ವ್ಯಕ್ತಿ. ಅದೆಷ್ಟೋ ಬಡ ಹೆಣ್ಣುಮಕ್ಕಳ ಮದುವೆ, ಯುವಕರಿಗೆ ಉದ್ಯೋಗ, ಅಶಕ್ತರಿಗೆ ಮನೆ, ಆರ್ಥಿಕ ಸಹಾಯ ಮಾಡಿರುವ ಅಲಿಯವರ ಸಮಾಜಸೇವೆ ಮುಂದಕ್ಕೂ ಇದೇ ರೀತಿ ಮುಂದುವರಿಯಲಿ. ಭರತ್ ಶೆಟ್ಟಿ ಗೆದ್ದು ಐದು ವರ್ಷ ಅಧಿಕಾರದಲ್ಲಿರುವಾಗ ಎಷ್ಟು ಮಂದಿ ಹಿಂದೂ ಯುವಕರಿಗೆ ಕೆಲಸ ಕೊಟ್ಟಿದ್ದಾರೆ? ಅವರು ಕೆಲಸ, ಡೋನೇಷನ್ ಯಾವುದನ್ನೂ ಕೊಡಲ್ಲ. ಅವರಿಗೆ ಹಿಂದೂ ಯುವಕರ ಹೆಣದ ಮೇಲೆ ರಾಜಕೀಯ ಮಾಡುವುದು ಮಾತ್ರ ಗೊತ್ತು” ಎಂದು ಹೇಳಿದರು.
ವೇದಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ, ನೀರಜ್ ಪಾಲ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡೆಕೇರಿ, ಪುರುಷೋತ್ತಮ ಚಿತ್ರಾಪುರ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕವಿತಾ ಸನಿಲ್, ಗಿರೀಶ್ ಆಳ್ವ, ದೀಪಕ್ ಪೂಜಾರಿ, ಮುಹಮ್ಮದ್ ಕುಂಜತ್ತಬೈಲ್, ಉತ್ತಮ್ ಆಳ್ವ, ರಾಘವೇಂದ್ರ ರಾವ್, ಸಾರಿಕಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಉತ್ತಮ್ ಆಳ್ವ ಸಾರಥ್ಯದಲ್ಲಿ ತುಷಾರ್, ಅಭಿಲಾಷ್, ಚಂದ್ರಶೇಖರ, ಮನೋಜ್, ಹೃತಿಕ್ ಶೆಟ್ಟಿ, ಇರ್ಷಾದ್ ಮತ್ತು ತಂಡದ 70ಕ್ಕೂ ಹೆಚ್ಚು ಯುವಕರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಇನಾಯತ್ ಅಲಿ ಅವರು ಪಕ್ಷದ ಧ್ವಜ ಕೊಟ್ಟು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.