ಸುರತ್ಕಲ್: ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರು ಗುರುವಾರ ಬೆಳಗ್ಗೆ ಕಾವೂರು ಮೈದಾನದಲ್ಲಿ ಬಹಿರಂಗ ಸಮಾವೇಶ ನಡೆಸಿ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಭರ್ಜರಿ ರೋಡ್ ಶೋ ನಡೆಸಿದರು. ಬಳಿಕ ನಾಮಪತ್ರ ಸಲ್ಲಿಸಲು ತೆರಳಿದರು. ಈ ವೇಳೆ ಪಕ್ಷದ ಮುಖಂಡರು, ಸಹಸ್ರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಸಾಥ್ ನೀಡಿದರು.
ಸಮಾವೇಶದಲ್ಲಿ ಮಾತಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್ ಅವರು”ಕಾಂಗ್ರೆಸ್ ಪಕ್ಷ ನಿಂತ ನೀರಲ್ಲ ಹರಿಯುವ ನೀರು. ಹೀಗಾಗಿ ಇನಾಯತ್ ಅಲಿ ಅನ್ನುವ ಯುವ ನಾಯಕನಿಗೆ ಪಕ್ಷ ಟಿಕೆಟ್ ನೀಡಿದೆ. ಓರ್ವ ಸಮರ್ಥ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ. ಯಾವನೇ ಒಬ್ಬ ಬಿಜೆಪಿ ನಾಯಕನ ಮಗನ ಮೇಲೆ ಕೇಸಿಲ್ಲ, ಕ್ರಿಮಿನಲ್ ಹಿನ್ನೆಲೆಯಿಲ್ಲ. ಅವರು ಹಿಂದುಳಿದ ವರ್ಗಗಳ ಯುವಕರನ್ನು ಬಳಸಿಕೊಂಡು ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿಸುವಂತೆ ನೋಡಿಕೊಳ್ಳುತ್ತಿದ್ದಾರೆ. ಯಾಕೆಂದರೆ ಅವರ ಮಕ್ಕಳು ಮಾತ್ರ ಅಮೇರಿಕಾ, ಲಂಡನ್, ಯುರೋಪ್ ನಲ್ಲಿ ಕಲಿಯಬೇಕು ಒಳ್ಳೆಯ ಕೆಲಸದಲ್ಲಿರಬೇಕು. ಕಾರ್ಯಕರ್ತರು ಬೀದಿ ಹೆಣವಾಗಬೇಕು” ಎಂದು ಕಿಡಿಕಾರಿದರು.
ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ ಮಾತನಾಡಿ, “ಮಾಜಿ ಶಾಸಕ ಮೊಯಿದೀನ್ ಬಾವಾ ದುಡುಕಿನ ನಿರ್ಧಾರ ಕೈಗೊಳ್ಳದೆ ನಮ್ಮೊಂದಿಗೆ ಬರಬೇಕು. ನಾವೆಲ್ಲರೂ ಅವರೆಲ್ಲರ ಜೊತೆಗಿದ್ದೇವೆ. ಅವರು ವೈಮನಸ್ಸು ಏನೇ ಇದ್ದರೂ ಪಕ್ಷಕ್ಕಾಗಿ ದುಡಿಯಬೇಕು. ಇನಾಯತ್ ಅಲಿ ಅವರು ಯೋಗ್ಯ ಅಭ್ಯರ್ಥಿ ಎಂದು ಪಕ್ಷ ಗುರುತಿಸಿ ಟಿಕೆಟ್ ನೀಡಿದೆ. ಅವರಿಗೆ ನಾವೆಲ್ಲರೂ ಬೆಂಬಲಿಸಬೇಕು. ಕಳೆದ ಬಾರಿ ಸುರತ್ಕಲ್ ಭಾಗದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನ ಕೊಲೆ ಆಯ್ತು ಭರತ್ ಶೆಟ್ರು ಗೆದ್ದರು. ಈ ಬಾರಿ ಯಾರ ಕೊಲೆಯೂ ನಡೆಯದಿರಲಿ ಎಂಬ ನಮ್ಮೆಲ್ಲರ ಪ್ರಾರ್ಥನೆಯಿಂದ ಪುಣ್ಯಕ್ಕೆ ಕೊಲೆ ನಡೆದಿಲ್ಲ. ಅವರು ಹೇಳ್ತಾರೆ ಸಾಯಿಬರಿಗೆ ಟಿಕೆಟ್ ಸಿಕ್ಕಿದೆ ನಾವು ಸುಲಭವಾಗಿ ಗೆಲ್ಲುತ್ತೇವೆ ಎಂದು. ಆದರೆ ಇದು ಅವರ ಭ್ರಮೆಯಾಗಿದೆ. ಯಾಕೆಂದರೆ ನಾವೆಲ್ಲರೂ ಹಿಂದೂಗಳು ಒಗ್ಗಟ್ಟಾಗಿ ಮುಸ್ಲಿಂ ಅಭ್ಯರ್ಥಿಯನ್ನು ಸೋಲಲು ಬಿಡುವುದಿಲ್ಲ. ಇನ್ನುಳಿದ 20 ದಿನಗಳ ಅವಧಿಯಲ್ಲಿ ಪಕ್ಷ ನೀಡಿರುವ ಪ್ರಬುದ್ಧ ಅಭ್ಯರ್ಥಿಯನ್ನು ಗೆಲ್ಲಿಸುವ ಪಣ ತೊಡಬೇಕು” ಎಂದು ಕರೆ ನೀಡಿದರು.
ಬಳಿಕ ಮಾತಾಡಿದ ಅಭ್ಯರ್ಥಿ ಇನಾಯತ್ ಅಲಿ ಅವರು, “ಪಕ್ಷ ನನ್ನ ಸೇವೆಯನ್ನು ಗುರುತಿಸಿ ಟಿಕೆಟ್ ನೀಡಿದೆ. ನನ್ನನ್ನು ಎಲ್ಲಾ ಸಮುದಾಯದ ಜನರು ಪ್ರೀತಿಯಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ. ಮಂಗಳೂರು ಉತ್ತರ ಕ್ಷೇತ್ರದ ಕಾರ್ಯಕರ್ತರು, ಮುಖಂಡರಲ್ಲಿ ಏನೇ ವೈಮನಸ್ಸು ಇದ್ದರೂ ಅದನ್ನು ಮರೆತು ಎಲ್ಲರೂ ಒಂದಾಗಿ ಗೆಲುವಿಗೆ ಶ್ರಮಿಸಿ” ಎಂದರು.
ವೇದಿಕೆಯಲ್ಲಿ ಮಿಥುನ್ ರೈ, ಮಾಜಿ ಮೇಯರ್ ಕವಿತಾ ಸನಿಲ್, ಸುಧೀರ್ ಕುಮಾರ್ ಮುರಳಿ, ಗಿರೀಶ್ ಆಳ್ವ, ಶಾಹುಲ್ ಹಮೀದ್, ನೀರೇಶ್ ಪಾಲ್, ಉಮೇಶ್ ದಂಡೆಕೇರಿ, ಕೆ. ಅಭಯಚಂದ್ರ ಜೈನ್, ಯು. ಪಿ ಇಬ್ರಾಹಿಂ, ಶಶಿಕಲಾ ಪದ್ಮನಾಭ, ಜೇಸನ್ ಸುರತ್ಕಲ್, ಸುರೇಂದ್ರ ಕಂಬಳಿ, ಮುಫಿದಾ, ಚಂದ್ರಹಾಸ್ ಪೂಜಾರಿ, ಶ್ರೀನಿವಾಸ್ ಸಾಲಿಯಾನ್, ಆನಂದ ಅಮೀನ್, ನೀರಜ್ ಪಾಲ್, ಮಂಗಳೂರು ಉತ್ತರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಹಮ್ಮದ್ ಸಮೀರ್ ಕಾಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.