ಮಂಗಳೂರು ಉತ್ತರದಲ್ಲಿ ಭರತ್ ಶೆಟ್ಟಿ vs ಇನಾಯತ್ ಅಲಿ! “ಬಾವಾ” ಜೆಡಿಎಸ್ ಸ್ಪರ್ಧೆಗೆ ಹೆಚ್ಚಿದ ಒತ್ತಡ!!

ಮಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್’ನ ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು ನಿರೀಕ್ಷೆಯಂತೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಇನಾಯತ್ ಅಲಿ ಅವರಿಗೆ ಟಿಕೆಟ್ ನೀಡಲಾಗಿದೆ.
ಟಿಕೆಟ್ ವಂಚಿತ ಮೊಯ್ದೀನ್ ಬಾವ ನಿರ್ಧಾರ ಇನ್ನೂ ಸ್ಪಷ್ಟವಾಗಿಲ್ಲ. ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಬಾವಾ ಜೆಡಿಎಸ್ ಅಭ್ಯರ್ಥಿ ಎಂದು ಪ್ರಚಾರ ಮಾಡುತ್ತಿದ್ದು ಸತ್ಯಾಸತ್ಯತೆ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಮೊಯಿದೀನ್ ಬಾವಾ ಟಿಕೆಟ್ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದ ಭಗೀರಥ ಪ್ರಯತ್ನ ಕೊನೆಗೂ ವಿಫಲಗೊಂಡಿದೆ.
ಇನಾಯತ್ ಅಲಿ ತಮ್ಮ “ಐ ಆಮ್” ಫೌಂಡೇಶನ್ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಡಿಕೆ ಶಿವಕುಮಾರ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಇನಾಯತ್ ಅಲಿ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದ್ದಲ್ಲದೆ ಅಧಿಕೃತವಾಗಿ ಚುನಾವಣಾ ನಾಮಪತ್ರ ಸಲ್ಲಿಸಲು ಕಾಂಗ್ರೆಸ್ ನ ಬಿ ಫಾರಂ ಕೂಡ ಬುಧವಾರ ತಡರಾತ್ರಿ ನೀಡಿದೆ. ದೆಹಲಿಯಲ್ಲಿರುವ ಇನಾಯತ್ ಅಲಿ ಅವರು ಬಿ ಫಾರಂ ಹಿಡಿದುಕೊಂಡು ಬುಧವಾರ ತಡರಾತ್ರಿ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದು ಅವರಿಗೆ ಬೆಂಬಲಿಗರು ಭರ್ಜರಿ ಸ್ವಾಗತ ಕೋರಿದ್ದಾರೆ.
ಗುರುವಾರ ಇನಾಯತ್ ಅಲಿ ಅವರು ಸಹಸ್ರಾರು ಸಂಖ್ಯೆಯ ಅಭಿಮಾನಿಗಳು, ಮತದಾರರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲು ಕಾವೂರಿನಲ್ಲಿ ವೇದಿಕೆ
ಕೂಡ ಸಿದ್ಧಗೊಂಡಿದೆ. ಪಕ್ಷದ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಇನಾಯತ್ ಅಲಿ, ಈಗಾಗಲೇ
ನಿರಂತರವಾಗಿ ಕ್ಷೇತ್ರದುದ್ದಕ್ಕೂ ಸಂಚರಿಸಿ ಬೂತ್ ಮಟ್ಟದಲ್ಲಿ
ಕಾರ್ಯಕರ್ತರನ್ನು ಸಂಘಟಿಸಿದ್ದು, ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ಷೇತ್ರದ ಹಿರಿಯರು, ಕಿರಿಯರು ಅಲಿಗೆ ಸಾಥ್ ನೀಡುತ್ತಿದ್ದು ಬಹುದೊಡ್ಡ ಯುವಕರ ಪಡೆಯೇ ಇನಾಯತ್ ಅಲಿಯವರ ಬೆನ್ನ ಹಿಂದಿದೆ. ಉತ್ತರ ಕ್ಷೇತ್ರದಲ್ಲಿ ಪ್ರಬಲವಾಗಿರುವ ಹಾಲಿ ಶಾಸಕ ಡಾ. ಭರತ್ ಶೆಟ್ಟಿ ಎದುರು ಸೆಣಸಾಡಲು ಸಕ್ರಿಯ ಯುವ ನಾಯಕನ ಅವಶ್ಯಕತೆ ಮನಗಂಡಿರುವ ಕಾಂಗ್ರೆಸ್, ಇನಾಯತ್ ಅಲಿ ಸೂಕ್ತ ಅಭ್ಯರ್ಥಿ ಎಂದು ಪರಿಗಣಿಸಿ ಅವರಿಗೆ ಟಿಕೆಟ್ ನೀಡಿದೆ.

error: Content is protected !!