ಕಿನ್ನಿಗೋಳಿ: “ಕಳೆದ 20 ವರ್ಷಗಳಿಂದ ಸಕ್ರಿಯವಾಗಿ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯದಲ್ಲಿದ್ದು ಈ ಬಾರಿ ಮತ್ತೊಮ್ಮೆ ಪಕ್ಷ ನನ್ನ ಸಾಮಾಜಿಕ ಸೇವೆಯನ್ನು ಗುರುತಿಸಿ ಮೂಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲು ಅವಕಾಶ ಮಾಡಿಕೊಟ್ಟಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದು ಅದು ರಾಜಕೀಯದಲ್ಲಿ ಹೆಚ್ಚಿನ ಪಾಠ ಕಲಿಸಿದೆ” ಎಂದು ಮಿಥುನ್ ರೈ ಹೇಳಿದರು.
ಮಾಧ್ಯಮಗಳ ಮುಂದೆ ಮಾತಾಡಿದ ಅವರು, “ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ನಿಷ್ಕಲಂಕ ವ್ಯಕ್ತಿತ್ವದ ರಾಜಕಾರಣಿ. ಅವರ ಮಾರ್ಗದರ್ಶನದಲ್ಲಿ ನಾನು ಈ ಭಾಗದಲ್ಲಿ ಪಕ್ಷ ಸಂಘಟನೆಗೆ ಪ್ರಾಮುಖ್ಯತೆ ನೀಡಿದ್ದು 225 ಬೂತ್ ಗಳಲ್ಲಿ ಸಂಚರಿಸಿ ಅಲ್ಲಿ ಯುವ ಕಾರ್ಯಕರ್ತರನ್ನು ಪಕ್ಷಕ್ಕೆ ಸೆಳೆಯಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳ ಅಡಿಯಲ್ಲಿ ಮನೆ ಮನೆಗೆ ಭೇಟಿ ನೀಡಿದ್ದು ಈ ಬಾರಿ ಮತದಾರರು ಪಕ್ಷದ ಮೇಲೆ ಹೆಚ್ಚಿನ ಒಲವು ಹೊಂದಿದ್ದಾರೆ” ಎಂದು ಹೇಳಿದರು.
“ನಾನು ವೈದ್ಯಕೀಯ ಕುಟುಂಬದಿಂದ ಬಂದಿದ್ದು ಜನರ ಸೇವೆ ಮಾಡುವ ಉದ್ದೇಶದಿಂದ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ್ದೇನೆ. ಏನಾದರೂ ಬದಲಾವಣೆ ತರಬೇಕು ಎಂಬ ಆಸೆ ನನ್ನದಾಗಿದೆ. ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ನೆಲೆಸಬೇಕು. ತುಳುನಾಡಿನಲ್ಲಿ ಜನಿಸಿದ್ದಕ್ಕೆ ಅದರ ಋಣ ತೀರಿಸಬೇಕು, ಧಾರ್ಮಿಕ ಕಲೆ, ಸಂಸ್ಕೃತಿ ಉಳಿಸಬೇಕು. ಮತೀಯ ಸೌಹಾರ್ದತೆ ನಶಿಸಬಾರದು ಎಂಬ ಆಶಯ ನನ್ನದು. ಈ ಬಾರಿ ಜನರು ತಮ್ಮ ಅಮೂಲ್ಯ ಮತಗಳನ್ನು ಕೊಟ್ಟು ಆಶೀರ್ವಾದ ನೀಡಿದಲ್ಲಿ ಅವರ ಸೇವೆಗೆ ಸದಾ ಬದ್ಧನಾಗಿದ್ದೇನೆ” ಎಂದು ಮಿಥುನ್ ರೈ ಹೇಳಿದರು.
“2013ರಲ್ಲಿ “ಗೋದಾನ” ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದೆ. 150 ಗೋವುಗಳನ್ನು ದಾನ ಮಾಡಿ ಆ ಮೂಲಕ ದೇಶೀಯ ತಳಿಗಳನ್ನು ಉಳಿಸಿ ಸಂರಕ್ಷಣೆ ಮಾಡಬೇಕೆಂಬ ಉದ್ದೇಶದಿಂದ ಕಾರ್ಯಕ್ರಮ ರೂಪಿಸಿದ್ದೆ. ಇದು ಸಫಲವಾಗಿದ್ದು ಸದ್ಯ 300ಕ್ಕೂ ಹೆಚ್ಚು ಗೋವುಗಳನ್ನು ದಾನ ಮಾಡಲಾಗಿದ್ದು ನಿರಂತರವಾಗಿ ಮುಂದುವರಿದಿದೆ” ಎಂದರು.
“ತುಳುನಾಡಿನಲ್ಲಿ ಯುವಜನರು ಉದ್ಯೋಗ ಇಲ್ಲದೆ ಖಾಲಿ ಕೂತಿದ್ದಾರೆ. ಅದೆಷ್ಟೋ ಮಂದಿ ಉನ್ನತ ಶಿಕ್ಷಣ ಪಡೆದು ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ, ಮುಂದೆಯೂ ಯುವಜನರ ಉದ್ಯೋಗ, ಅಭ್ಯುದಯ ನನ್ನ ಗುರಿಯಾಗಿದೆ. ಮೂಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಐಟಿ ಹಬ್ ನಿರ್ಮಿಸುವ ಮೂಲಕ 20,000 ಮಂದಿ ಯುವಕರಿಗೆ ಉದ್ಯೋಗ ಕಲ್ಪಿಸಲು ಬದ್ಧನಾಗಿದ್ದೇನೆ. ಕ್ಷೇತ್ರದಲ್ಲಿ 200 ಬೆಡ್ ಗಳ ಸರಕಾರಿ ಆಸ್ಪತ್ರೆ, ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಯ ಉದ್ದೇಶ ನನ್ನಲ್ಲಿದೆ. ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸಿ ಯುವಜನರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಸ್ಟೇಡಿಯಂ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದೇನೆ” ಎಂದರು.
ಕೆಪಿಸಿಸಿ ಸದಸ್ಯ ವಸಂತ ಬೆರ್ನಾರ್ಡ್, ಮೋನಪ್ಪ ಶೆಟ್ಟಿ, ಅಶೋಕ್ ಪೂಜಾರಿ, ಉಲ್ಲಾಸ್ ಶೆಟ್ಟಿ, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಮೋಹನ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.