“ಸರ್ವಜ್ಞನ ವಚನಗಳು ಸಾರ್ವಕಾಲಿಕವಾದುದು” -ಡಾ. ಭರತ್ ಶೆಟ್ಟಿ


ಬೋಂದೆಲ್ ನಲ್ಲಿ ಸರ್ವಜ್ಞ ವೃತ್ತ ಲೋಕಾರ್ಪಣೆ

ಸುರತ್ಕಲ್: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಬೋಂದೆಲ್ ಜಂಕ್ಷನ್ ಬಳಿ ನೂತನವಾಗಿ ನಿರ್ಮಿಸಿರುವ ಸರ್ವಜ್ಞ ವೃತ್ತದ ಉದ್ಘಾಟನಾ ಸಮಾರಂಭ ಸೋಮವಾರ ಸಂಜೆ ನೆರವೇರಿತು.
ಪ್ರಾಸ್ತಾವಿಕ ಮಾತನ್ನಾಡಿದ ರಾಜ್ಯ ಕುಂಬಾರರ ಯುವವೇದಿಕೆ ಸ್ಥಾಪಕಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅವರು, “ರಾಜ್ಯದಲ್ಲೇ ಇಷ್ಟು ದೊಡ್ಡದಾದ ಸರ್ವಜ್ಞನ ವೃತ್ತ ಬೇರೆಲ್ಲೂ ಇಲ್ಲ. ಈ ಮೂಲಕ ಜ್ಞಾನ ವೃದ್ಧಿಗೆ ಸಹಕಾರಿಯಾಗಲಿದೆ. ಕುಲಾಲ ಸಮುದಾಯದ ಸರ್ವಶ್ರೇಷ್ಠ ಸಂತ ಸರ್ವಜ್ಞನ ಸ್ಮರಣೆ ಎಲ್ಲ ಕಾಲಕ್ಕೂ ನೆನಪಿನಲ್ಲಿ ಉಳಿಯಬೇಕು” ಎಂದರು.


ಉದ್ಘಾಟನೆ ನೆರವೇರಿಸಿ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು, “ಮುಡಾ ವತಿಯಿಂದ ಮಂಗಳೂರು ಉತ್ತರ ಕ್ಷೇತ್ರದುದ್ದಕ್ಕೂ ಹತ್ತಾರು ಜನಪರ ಕಾಮಗಾರಿಗಳು ನಡೆಯುತ್ತಿವೆ. ಇದಕ್ಕಾಗಿ ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಕವಿ, ದಾರ್ಶನಿಕ ಸರ್ವಜ್ಞನ ವಚನಗಳು ಸಾರ್ವಕಾಲಿಕವಾದುದು. ಸರ್ವಜ್ಞನ ಹೆಸರು ಜನಮಾನಸದಲ್ಲಿ ನೆನಪಲ್ಲಿ ಉಳಿಯಬೇಕು ಎಂಬ ಉದ್ದೇಶದಿಂದ ಬೋಂದೆಲ್ ಬಳಿ ಬೃಹತ್ ವೃತ್ತವನ್ನು ನಿರ್ಮಿಸಲಾಗಿದೆ. ಈ ಮೂಲಕ ಸರ್ವಜ್ಞನ ವಚನಗಳು ಮುಂದಿನ ಪೀಳಿಗೆಯ ಜನರಿಗೂ ಮುಟ್ಟಬೇಕು. ಮಕ್ಕಳು ಸರ್ವಜ್ಞ ಉಳಿಸಿಹೋದ ಬದುಕಿನ ಪಾಠವನ್ನು ಅರಿತುಕೊಳ್ಳಬೇಕು ಎಂಬ ದೃಷ್ಟಿಕೋನದಿಂದ ಮುಡಾ ಮೂಲಕ ಈ ವೃತ್ತವನ್ನು ಲೋಕಾರ್ಪಣೆಗೊಳಿಸಲಾಗಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು. ಇಲ್ಲಿ ಸುತ್ತಮುತ್ತ ಮಹಿಳಾ ಕಾಲೇಜ್, ಖಾಸಗಿ, ಸರಕಾರಿ ಶಿಕ್ಷಣ ಸಂಸ್ಥೆಗಳು ಇವೆ. ಅದರಲ್ಲಿ ಕಲಿಯುವ ಮಕ್ಕಳ ಜ್ಞಾನಾಭಿವೃದ್ಧಿಗೆ ಈ ವೃತ್ತ ಪೂರಕವಾಗಲಿ” ಎಂದರು.


ವೇದಿಕೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ., ಮಂಗಳೂರು ಮೇಯರ್ ಜಯಾನಂದ ಅಂಚನ್, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಕಾರ್ಪೋರೇಟರ್ ಸಂಗೀತಾ ನಾಯಕ್, ಅಣ್ಣಯ್ಯ ಕುಲಾಲ್ ಉಳ್ತೂರು, ಸುಧೀರ್ ಶೆಟ್ಟಿ ಕಣ್ಣೂರು, ಮಯೂರ್ ಉಳ್ಳಾಲ, ಕುಲಾಲ ಕುಂಬಾರರ ಯುವವೇದಿಕೆ ಅಧ್ಯಕ್ಷ ಸುಕುಮಾರ್ ಬಂಟ್ವಾಳ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಗಂಗಾಧರ್ ಭಂಜನ್, ಅನಿಲ್ ದಾಸ್, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ರಣ್ ದೀಪ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!