ಪಬ್ ಇದೆ, ನೋ ಮ್ಯೂಸಿಕ್..!! ಮಂಗಳೂರು ಪೋಲೀಸರ ಹೊಸ ರೂಲ್ಸ್ ಗೆ ಗ್ರಾಹಕರ ಆಕ್ರೋಶ!!

ಮಂಗಳೂರು: ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಎನ್ನುವುದು ಯಾವ ಮಟ್ಟಕ್ಕೆ ಶಾಪಗ್ರಸ್ಥವಾಗಿದೆ, ಪ್ರವಾಸಿ ಸ್ಥಳಗಳು ಅಭಿವೃದ್ಧಿ ಕಾಣದೆ ಹೊರಗಿನ ಪ್ರವಾಸಿಗರು ಬಿಡಿ ಜಿಲ್ಲೆಯ ಜನರಿಂದಲೇ ಯಾವ ರೀತಿ ತಿರಸ್ಕಾರಕ್ಕೆ ಒಳಗಾಗಿದೆ ಅನ್ನೋದನ್ನು ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಹೀಗಿರುವಾಗ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಹೊಸದಾಗಿ ಜಾರಿಗೆ ತರ್ತಾ ಇರೋ ರೂಲ್ಸ್ ಗಳು ಮತ್ತಷ್ಟು ಪರಿಸ್ಥಿತಿಯನ್ನು ಹದಗೆಡಿಸುತ್ತಿವೆ.
ಎಜುಕೇಷನ್ ಹಬ್, ಬೀಚ್ ಸಿಟಿ ಎಂದೆಲ್ಲ ಕರೆಯಲ್ಪಡುವ ಮಂಗಳೂರಲ್ಲಿ ಕಳೆದೆರಡು ದಿನಗಳಿಂದ ಹೊಸ ರೂಲ್ಸ್ ಒಂದು ಜಾರಿಗೆ ಬಂದಿದೆ. ಕೆಲದಿನಗಳ ಹಿಂದೆ ಎಡಿಜಿಪಿ ಅಲೋಕ್ ಕುಮಾರ್ ಅವರು ಮಂಗಳೂರಿಗೆ ಬಂದು ನಾಗರಿಕರನ್ನು ಭೇಟಿಯಾಗಿ ಹೋದ ಮರುಕ್ಷಣವೇ ಹೊಸ ರೂಲ್ಸ್ ಒಂದನ್ನು ಪೊಲೀಸ್ ಇಲಾಖೆ ಜಾರಿಗೆ ತಂದಿದ್ದು ಇದಕ್ಕೆ ಪಬ್ ಮಾಲಕರು, ಪ್ರವಾಸಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

ಪಬ್ ನಲ್ಲಿ ನೋ ಮ್ಯೂಸಿಕ್!
ಪಬ್ ಸಂಸ್ಕೃತಿ ಇಂದು ನಿನ್ನೆಯದ್ದಲ್ಲ. ಮುಂದುವರಿದ ಮುಂಬೈ, ಬೆಂಗಳೂರು, ಕಲ್ಕತ್ತಾ, ದೆಹಲಿಯಲ್ಲಿ ಅಸಂಖ್ಯ ಪಬ್ ಗಳಿವೆ. ವಾರಾಂತ್ಯಗಳಲ್ಲಿ ಜನರು ತಮ್ಮ ಕೆಲಸದ ಜಂಜಾಟದಿಂದ ಮುಕ್ತಿ ಪಡೆದು ರಿಲ್ಯಾಕ್ಸ್ ಆಗಲು ಪಬ್ ಹೋಗುತ್ತಾರೆ. ಅಲ್ಲಿ ಮ್ಯೂಸಿಕ್, ಡ್ಯಾನ್ಸ್ ಇರುತ್ತೆ. ಪ್ರವಾಸಿಗರ ಅನುಕೂಲಕ್ಕೆ ಪಬ್ ನಿರ್ದಿಷ್ಟ ಸಮಯದವರೆಗೆ ತೆರೆದಿರುತ್ತೆ. ಆದರೆ ಮಂಗಳೂರಲ್ಲಿ ಮಾತ್ರ ಅದು ಪಬ್ ನಲ್ಲಿ ಮ್ಯೂಸಿಕ್ ಹಾಕುವಂತಿಲ್ಲ. ಮೆಲುವಾಗಿ ಹಾಡು ಹಾಕಿದರೂ ಕೇಸ್ ಹಾಕಲು ಪೊಲೀಸರಿಗೆ ಅಧಿಕಾರಿಗಳು ಫರ್ಮಾನು ಹೊರಡಿಸಿದ್ದಾರಂತೆ.

“ಹಾಲಿವುಡ್ ಅಡ್ಡಾ”ಕ್ಕೆ ದಾಳಿ!
ಮಂಗಳೂರಿನ ಹೆಸರಾಂತ ಪಬ್ ಹಾಲಿವುಡ್ ಅಡ್ಡಾಕ್ಕೆ ಇದೇ ರೀತಿ ದಾಳಿ ಮಾಡಿರುವ ಪೊಲೀಸರು ಅಲ್ಲಿ ಕುಟುಂಬ ವರ್ಗದೊಂದಿಗೆ ಇದ್ದ ನಾಲ್ವರ ಐಡಿ ಕೇಳಿ ಬೆದರಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಬಕಾರಿ ನಿಯಮಗಳ ಪ್ರಕಾರ ಪಬ್ ಅಥವಾ ಬಾರ್ ನಲ್ಲಿ ಏನಾದರೂ ಅಹಿತಕರ ಘಟನೆಗಳು ನಡೆದಾಗ ಮಾತ್ರವೇ ಗ್ರಾಹಕರ ಐಡಿ ಪರಿಶೀಲನೆ ನಡೆಸುವ ಸ್ವಾತಂತ್ರ್ಯ ಪೊಲೀಸರಿಗೆ ಇದೆ. ಹೀಗಿರುವಾಗ ಏಕಾಏಕಿ ಪಬ್ ಒಳಹೊಕ್ಕು ಐಡಿ ಕೇಳಿದ್ದೇಕೆ ಅನ್ನೋದು ಗ್ರಾಹಕರ ಪ್ರಶ್ನೆ.

ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ, ಸಂಜೆಯಾಗುತ್ತಿದ್ದಂತೆ ರೋಡ್ ಖಾಲಿ ಖಾಲಿ!!

ಮಂಗಳೂರು ಸ್ಮಾರ್ಟ್ ಸಿಟಿ ಅನ್ನೋದು ಕೇವಲ ಹೆಸರಿಗಷ್ಟೇ ಸೀಮಿತವಾಗಿದೆ. ಸಂಜೆ 7 ಗಂಟೆ ದಾಟಿದರೆ ಸಾಕು ಬಹುತೇಕ ರಸ್ತೆಗಳು ನಿರ್ಜನವಾಗುತ್ತವೆ. 8 ಗಂಟೆಗೆಲ್ಲ ಗ್ರಾಮೀಣ ಭಾಗದ ಬಸ್ ಗಳು ಜನರಿಲ್ಲದೆ ಸಂಚಾರ ನಿಲ್ಲಿಸಿದರೆ 9 ಗಂಟೆಯ ನಂತರ ನಗರದೊಳಗಡೆ ಓಡಾಟಕ್ಕೂ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿಯಿದೆ. ಬೀಚ್, ಪಾರ್ಕ್ ಗಳು ಆರು ಗಂಟೆಗೂ ಮುನ್ನವೇ ಬಲವಂತವಾಗಿ ಪೊಲೀಸರು ಬಂದ್ ಮಾಡಿಸುತ್ತಾರೆ. ಬೇರೆಲ್ಲ ಜಿಲ್ಲೆ, ರಾಜ್ಯಗಳಲ್ಲಿ ಕೊರೋನಾ ಬಳಿಕ ಜನರು ನಿರ್ಭಯವಾಗಿ ಓಡಾಡಿಕೊಂಡಿದ್ದರೆ ಇಲ್ಲಿ ನಿತ್ಯ ಲಾಕ್ ಡೌನ್ ಸನ್ನಿವೇಶ ಸೃಷ್ಟಿಯಾಗುತ್ತಿದೆ.

ಕೋಮು ಗಲಭೆಯಿಲ್ಲ, ಕ್ರೈಂ ಜಾಸ್ತಿಯಿಲ್ಲ!
ಪೊಲೀಸ್ ಕಮಿಷನರ್ ಆಗಿ ಎನ್.ಶಶಿಕುಮಾರ್ ಅವರು ಮಂಗಳೂರಿಗೆ ಬಂದು ಎರಡು ವರ್ಷ ಕಳೆದಿದೆ. ಈ ವೇಳೆಯಲ್ಲಿ ಕೋಮು ಗಲಭೆ ನಿಯಂತ್ರಣಕ್ಕೆ ಬಂದರೆ ಕ್ರೈಂ ಕೂಡ ಕಂಟ್ರೋಲ್ ನಲ್ಲಿದೆ. ಇದಕ್ಕೆ ಕಮಿಷನರ್ ಅವರ ಕಾರ್ಯವೈಖರಿ ಕಾರಣ ಅನ್ನೋದನ್ನು ಜನಸಾಮಾನ್ಯರು ಒಪ್ಪಿಕೊಳ್ಳುತ್ತಾರೆ. ಹೀಗಿರುವಾಗ ಪ್ರವಾಸಿಗರನ್ನು ಸೆಳೆಯಲು ಯೋಜನೆ ರೂಪಿಸದಿದ್ದಲ್ಲಿ ಮಂಗಳೂರಿಗೆ ಬರಲು ಪ್ರವಾಸಿಗರು ಹಿಂದೆ ಮುಂದೆ ನೋಡಬೇಕಾದ ಸನ್ನಿವೇಶ ಎದುರಾಗಲಿದೆ.

ದಿನಕ್ಕೊಂದು ರೂಲ್ಸ್ ತಂದರೆ ಉದ್ಯಮಿಗಳ ಪಾಡೇನು?
ಕೋಟ್ಯಂತರ ರೂಪಾಯಿ ಸುರಿದು ಲೈಸೆನ್ಸ್, ಟ್ಯಾಕ್ಸ್ ಸರಕಾರಕ್ಕೆ ಪಾವತಿ ಮಾಡಿ ರೆಸ್ಟೋರೆಂಟ್ ಪಬ್ ಮಾಡಿದರೂ ಪೊಲೀಸ್ ಇಲಾಖೆಯ ಹೊಸ ಹೊಸ ರೂಲ್ಸ್ ಗಳಿಂದ ಉದ್ಯಮಿಗಳು ನಷ್ಟ ಅನುಭವಿಸುವಂತಾಗಿದೆ. ಎರಡು ವರ್ಷ ಕೊರೋನಾ ಆತಂಕದಿಂದ ಪ್ರವಾಸೋದ್ಯಮ, ರೆಸ್ಟೋರೆಂಟ್ ಉದ್ಯಮಿಗಳು ನಿಧಾನಕ್ಕೆ ಚೇತರಿಸುತ್ತಿದ್ದು ಈ ವೇಳೆ ಈ ನಿಯಮಗಳು ಗಾಯದ ಮೇಲೆ ಬರೆ ಎಳೆದಂತಾಗುತ್ತಿವೆ. ಪೊಲೀಸ್ ಅಧಿಕಾರಿಗಳು ಏನೋ ಮಾಡಲು ಹೋಗಿ ಇನ್ನೇನೋ ಮಾಡುವ ಬದಲು ತಮ್ಮ ಆದೇಶವನ್ನು ಪರಾಮರ್ಶಿಸಬೇಕಿದೆ.

error: Content is protected !!