“ವೀರಕೇಸರಿ ಕಪ್ 2022” ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ
ಮಂಗಳೂರು: ಸಾಮಾಜಿಕ ಸಂಘಟನೆಯಾದ “ವೀರಕೇಸರಿ” ಇದರ ಆಶ್ರಯದಲ್ಲಿ ವೀರಕೇಸರಿ ಕಪ್-2022 ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಕ್ರೀಡಾಕೂಟ ಇತ್ತೀಚಿಗೆ ಶುಭಾಷಿತನಗರ ಬಳಿಯ ಮೈದಾನದಲ್ಲಿ ನಡೆಯಿತು.
ಮಂಗಳೂರು ಉತ್ತರ ಕ್ಷೇತ್ರ ಶಾಸಕ ಭರತ್ ವೈ. ಶೆಟ್ಟಿ ಅವರು ಬೆಲೂನ್ ಹಾರಿಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತಾಡಿದ ಅವರು, “44 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ವೀರಕೇಸರಿ ಸಂಘಟನೆ ಸಮಾಜಕ್ಕೆ ಮಾದರಿಯಾಗಿದೆ. ಸ್ವಂತಕ್ಕೆ ಸ್ವಲ್ಪ ಉಳಿಸಿಕೊಂಡು ಉಳಿದುದನ್ನು ಸಮಾಜಕ್ಕೆ ಮೀಸಲಿರಿಸಿದ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಒಂದೇ ಮನಸ್ಥಿತಿಯಿಂದ ದುಡಿಯುತ್ತಿರುವುದು ಶ್ಲಾಘನೀಯ ಕಾರ್ಯ. ಹಿರಿಯರ ಮಾರ್ಗದರ್ಶನದಿಂದ ಮುಂದೆ ಇನ್ನಷ್ಟು ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಮುನ್ನಡೆಯಲಿ” ಎಂದು ಶುಭ ಹಾರೈಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತಾಡುತ್ತಾ, “ಸುರತ್ಕಲ್ ಭಾಗದಲ್ಲಿ ಕ್ರೀಡೆ, ಸಾಂಸ್ಕೃತಿಕ ರಂಗದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವೀರಕೇಸರಿ ಸಂಘಟನೆ ವಿಶೇಷವಾಗಿ ಗುರುತಿಸಿಕೊಂಡಿದೆ. ಸಮಾಜಮುಖಿ ಕಾರ್ಯಗಳ ಮೂಲಕ ಇನ್ನಷ್ಟು ಎತ್ತರಕ್ಕೇರಲಿ” ಎಂದರು.
ವೇದಿಕೆಯಲ್ಲಿ ವಾಲಿಬಾಲ್ ಕ್ರೀಡಾಪಟು ಸುರತ್ಕಲ್ ಠಾಣಾ ಕ್ರೈಮ್ ಇನ್ ಸ್ಪೆಕ್ಟರ್ ಅರುಣ್ ಕುಮಾರ್ ಡಿ. ಅವರನ್ನು ಅತಿಥಿಗಳು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತಾಡಿದ ಅವರು, “ರಾಜ್ಯದಲ್ಲಿ ಎಲ್ಲಿ ನೋಡಿದರೂ ಕರಾವಳಿ ಭಾಗದ ಕ್ರೀಡಾಪಟುಗಳು ಸಾಧನೆ ಮಾಡುತ್ತಿದ್ದಾರೆ. ಇದು ಸಂತಸದ ವಿಚಾರ. ಅವರಿಗೆ ವೀರಕೇಸರಿಯಂತಹ ಸಾಮಾಜಿಕ ಸಂಘಟನೆಗಳು ಸಹಕಾರ ನೀಡುತ್ತಾ ಬಂದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯ” ಎಂದರು.
ಮಂಗಳೂರು ಉತ್ತರ ಶಾಸಕ ಭರತ್ ವೈ. ಶೆಟ್ಟಿ, ಮಹಾಬಲ ಪೂಜಾರಿ ಕಡಂಬೋಡಿ, ಮಂಜಯ್ಯ ಶೆಟ್ಟಿ ಗುಂಡಿಲ ಗುತ್ತು, ಸದಾಶಿವ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್. ಗಣಪತಿ ಮಯ್ಯ, ಖಂಡಿಗೆ ಬೀಡು ಆದಿತ್ಯ ಮುಕ್ಕಾಲ್ದಿ, ಚಿತ್ರ ನಿರ್ಮಾಪಕ ರವಿ ರೈ ಕಳಸ, ರಾಜೇಶ್ ಕುಡ್ಲ, ಖ್ಯಾತ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಕಾಂತಾರ ಖ್ಯಾತಿಯ ಶನಿಲ್ ಗುರು, ಮಾರಿಯಮ್ಮ ದೇವಸ್ಥಾನದ ಧರ್ಮದರ್ಶಿ ಅರುಣ್ ಪೈ, ಪಾಂಡುರಂಗ ವಿ. ಪ್ರಭು, ದೀಪಾ ಟ್ರೇಡರ್ಸ್ ಮಾಲಕ ರಮೇಶ್ ರಾವ್, ಸುರತ್ಕಲ್ ಠಾಣಾಧಿಕಾರಿ ಅರುಣ್ ಕುಮಾರ್, ಮಾಜಿ ಕಾರ್ಪೋರೇಟರ್ ಅಶೋಕ್ ಶೆಟ್ಟಿ, ಶುಭಾಷಿತ ನಗರ ರೆಸಿಡೆನ್ಸ್ ಅಶೋಸಿಯೇಷನ್ ಅಧ್ಯಕ್ಷ ರಮೇಶ್ ಶೆಟ್ಟಿ, ಕೈಲಾಸ್ ಟಿ. ತಡಂಬೈಲ್, ದೊಡ್ಡಕೊಪ್ಲ ಮೊಗವೀರ ಮಹಾಸಭಾ ಅಧ್ಯಕ್ಷ ಯಶವಂತ ಕರ್ಕೇರ, ವೀರಕೇಸರಿ ಸಂಘಟನೆಯ ಗೌರವಾಧ್ಯಕ್ಷ ಸುಧಾಕರ್, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ್ ಪಂಜಾ, ಮಾಧ್ಯಮ ಅಕಾಡೆಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಸುರತ್ಕಲ್ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಚಿತ್ರಾ ಜೆ. ಶೆಟ್ಟಿ, ಕಾರ್ಪೋರೇಟರ್ ಶ್ವೇತಾ ಪೂಜಾರಿ, ಸರಿತಾ ಶಶಿಧರ್, ನಯನ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.