ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಖನಿಜ ಸಾಗಾಟ ಮಾಡುವ ವಾಹನಗಳಲ್ಲಿ GPS ಉಪಕರಣ ಅಳವಡಿಸುವುದು ಕಡ್ಡಾಯವಾಗಿದ್ದು ರಾಜ್ಯದ ಪ್ರತೀ ಜಿಲ್ಲೆಯ ಜಿಲ್ಲಾಡಳಿತದ ಅಡಿಯಲ್ಲಿ ಅವುಗಳ ಮಾನಿಟರಿಂಗ್ ನಡೆಸಿ ಅನಧಿಕೃತ ಖನಿಜ (ಅದಿರು, ಮರಳು, ಕಲ್ಲು ಸಹಿತ ಇತರೆ ಖನಿಜ) ಸಾಗಾಣಿಕೆಯನ್ನು ತಡೆಯುವ ಕಾರ್ಯವು ಕಳೆದ ಎಂಟು-ಹತ್ತು ವರ್ಷಗಳಿಂದ ನಡೆಯುತ್ತಿದೆ.
ಆದರೆ ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಜಿಲ್ಲಾಡಳಿತಗಳು ನಡೆಸುತ್ತಿರುವ ಮಾನಿಟರಿಂಗ್ ಸಮರ್ಪಕವಾಗಿಲ್ಲವಂಬ ಕಾರಣ ನೀಡಿ ONE STATE ONE GPS ಎನ್ನುವ ವ್ಯವಸ್ಥೆಯನ್ನು ಜಾರಿಗೆ ತರುವ ಕೆಲಸಕ್ಕೆ ಕೈ ಹಾಕಿದೆ, ಈಗಾಗಲೇ ಟೆಂಡರ್ ಪ್ರಕ್ರಿಯೆಯು ಮುಗಿದಿದೆ.
ಏನಿದು ONE STATE ONE GPS?
ಟೆಂಡರ್ ದಾಖಲೆಗಳ ಪ್ರಕಾರ ಇದು GPS ಉಪಕರಣಗಳನ್ನು ವಾಹನಗಳಿಗೆ ಹೊಸದಾಗಿ ಅಳವಡಿಸುವ ಬಗೆಗಿನ ಟೆಂಡರ್ ಆಗಿರದೆ, GPS ಉಪಕರಣಗಳ ಮಾನಿಟರಿಂಗ್ ಗೆ ಅಗತ್ಯವಿರುವ ಸಾಫ್ಟ್ವೇರ್, ಪ್ರತೀ ಜಿಲ್ಲೆಯಲ್ಲಿ ಕಂಪ್ಯೂಟರ್, ಇಂಟರ್ನೆಟ್, ಸ್ಕ್ರೀನ್, ನೂರಕ್ಕೂ ಹೆಚ್ಚು ಸಿಬ್ಬಂದಿಗಳು, ಇವುಗಳು ಮಾತ್ರವೇ ಆಗಿದೆ.
ಆದರೆ ಈ OSOG ಮೊನಿಟರಿಂಗ್ ವ್ಯವಸ್ಥೆಯ ಟೆಂಡರ್ ದಾಖಲೆಗಳೇ ಹೇಳುವಂತೆ, ಖನಿಜ ಸಾಗಾಟ ವಾಹನಗಳು ಈಗಾಗಲೇ ಅಳವಡಿಸಿರುವ ಉಪಕರಣಗಳ ಬದಲಿಗೆ AIS 140 ಸರ್ಟಿಫಿಕೆಟ್ ಹೊಂದಿರುವ GPS ಉಪಕರಣಗಳನ್ನೇ ಹೊಸದಾಗಿ ಅಳವಡಿಸಬೇಕು ಹಾಗೂ ಅಂತಹಾ ವಾಹನಗಳಿಗೆ ಮಾತ್ರ ಖನಿಜ ಸಾಗಾಟ ಪರವಾನಗಿ ಲಭ್ಯವಾಗುತ್ತದೆ.
ಟೆಂಡರ್ ನಲ್ಲಿ ಭಾರೀ ಅವ್ಯವಹಾರ
1. ನಕಲಿ ದಾಖಲೆ/Fake documents: ಟೆಂಡರ್ ನಲ್ಲಿ ಭಾಗಿಯಾದವರಲ್ಲಿ 4 ಕಂಪೆನಿಗಳು ಟೆಕ್ನಿಕಲ್ ಕ್ವಾಲಿಫೈಡ್ ಆಗಿದ್ದು ಆ ನಾಲ್ವರ ಪೈಕಿ ಒಬ್ಬ ಬಿಡ್ಡುದಾರನು ಕ್ವಾಲಿಫಿಕೇಷನ್ ಗಾಗಿ ರೂ. 1.88 ಕೋಟಿಯ ಕಾರ್ಯಾದೇಶದ ಸುಳ್ಳು/ನಕಲಿ ದಾಖಲೆಯನ್ನು ನೀಡಿದ್ದರೂ, ಇಲಾಖೆಯು ಸ್ಪಷ್ಟೀಕರಣ ಪಡೆಯಲಾಗಿದೆ ಎಂದು ಹೇಳಿಕೊಂಡು ಆ ಸಂಸ್ಥೆಗೆ ಕಾರ್ಯಾದೆಶವನ್ನು ನೀಡಲು ಮುಂದಾಗಿದೆ.
2. Under value quote: ಸುಳ್ಳು/ನಕಲಿ ದಾಖಲೆಯನ್ನು ನೀಡಿರುವ ಬಿಡ್ಡುದಾರರು ಅತೀ ಕಡಿಮೆ unbalanced / under value quote ಮಾಡಿರುತ್ತಾರೆ. ಇವರಿಗೂ ನಂತರದ ಬಿಡ್ಡುದಾರರಿಗೂ ಇರುವ ವ್ಯತ್ಯಾಸ ಹಚ್ಚು ಕಮ್ಮಿ 250%!. Under value ಬಿಡ್ ಮಾಡಿರುವ ಸಂಸ್ಥೆಯ ದರದಲ್ಲಿ ಟೆಂಡರ್ ನಲ್ಲಿ ಕೇಳಲಾದ ನೂರಕ್ಕೂ ಹೆಚ್ಚು ಸಿಬ್ಬಂದಿಗಳ (minimum wages act ಪ್ರಕಾರದ) ಕನಿಷ್ಠ ವೇತನ, ಹಾರ್ಡ್ವೇರ್, ಸಾಫ್ಟ್ವೇರ್ ಸೇವೆಗಳು ಇವೆಲ್ಲವನ್ನು ಒದಗಿಸಿ ಲಾಭವಲ್ಲ ಅಸಲನ್ನೂ ಹುಟ್ಟಿಸಿಕೊಳ್ಳಲು ಸಾಧ್ಯವೇಇರುವುದಿಲ್ಲ, ಅಂದರೆ ಸುಳ್ಳು/ನಕಲಿ ದಾಖಲೆಯನ್ನು ಬಿಡ್ಡುದಾರರು ನಷ್ಟ ಮಾಡಿಕೊಳ್ಳುತ್ತಿದ್ದಾರೆ. ಆದರೂ Under value ಬಿಡ್ ಮಾಡಿರುವ ಸಂಸ್ಥೆಗೇ ಕಾರ್ಯಾದೇಶವನ್ನು ನೀಡಲಾಗುತ್ತಿದೆ.
ನಷ್ಟವಾದರೂ ಯಾಕಾಗಿ ಆದೇಶವನ್ನು ಪಡೆಯುತ್ತಿದೆ ಆ ಕಂಪೆನಿ?
ಇಲ್ಲಿ ನಡೆದಿರುವ ಟೆಂಡರ್ ಪ್ರಕ್ರಿಯೆಯೇ ಒಂದು ಕಣ್ಕಟ್ಟು. ಅಸಲಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ONE STATE ONE GPS ಎಂಬ ಮಾನಿಟರಿಂಗ್ ಸಾಫ್ಟ್ವೇರ್, ಹಾರ್ಡ್ವೇರ್ ಹಾಗೂ ಸಿಬ್ಬಂದಿಗಳಿಗೆ ಸೀಮಿತವಾಗಿರುವ ಮೂರು ಕೋಟಿಗಿಂತಲೂ ಕಡಿಮೆ ಮೌಲ್ಯದ ಈ ಟೆಂಡರ್ ನ ನೆಪದಲ್ಲಿ ರಾಜ್ಯದಲ್ಲಿರುವ ಲಕ್ಷಕ್ಕೂ ಹೆಚ್ಚು ಖನಿಜ/ಉಪಖನಿಜಗಳ ಸಾಗಾಟ ವಾಹನಗಳಲ್ಲಿ ಹೊಸದಾಗಿ ಅಳವಡಿಸ ಬೇಕಾಗಿರುವ GPS ಉಪಕರಣಗಳನ್ನು ಮಾರಲು ಒಂದೇ ಸಂಸ್ಥೆಗೆ ಅನುವು ಮಾಡಿಕೊಡುತ್ತಿದೆ. ಇದು ಸುಲಭವಾಗಿ ಯಾರಿಗೂ ಅರ್ಥವಾಗದಂತಿರುವ ಹೊಸ ರೀತಿಯ ಹಗರಣ.
ಒಂದು ವಾಹನದ ಜಿಪಿಎಸ್ ಉಪಕರಣ ಹಾಗೂ ಸೇವೆಗಳಿಗೆ ತಗಲುವ ಅಂದಾಜು ವೆಚ್ಚ,
ಪ್ರಥಮ ವರ್ಷ ರೂ. 15,000
ನಂತರ ಪ್ರತಿ ವರ್ಷ ಅಂದಾಜು ರೂ. 6000
ಅಂದರೆ ರಾಜ್ಯದಲ್ಲಿರುವ ಅಂದಾಜು 1,50,000 ಖನಿಜ (ಅದಿರು, ಕಲ್ಲಿದ್ದಲು, ಮರಳು, ಕಲ್ಲು, ಜಲ್ಲಿ ಇತರೆ) ಸಾಗಾಟ ವಾಹನಗಳಿಂದ ಬರುವ ಆದಾಯ ಹೆಚ್ಚು ಕಮ್ಮಿ ರೂ. 225 ಕೋಟಿ. Monopoly ಆದ ನಂತರ, ಮೇಲಿನವರ ಅಭಯ ಹಸ್ತ ಇದ್ದಮೇಲೆ ಇನ್ನೇನು ಬೇಕು ವಾರ್ಷಿಕ ನೂರಾರು ಕೋಟಿ ವ್ಯವಹಾರ. ಖನಿಜ ಗುತ್ತಿಗೆದಾರರು ಹಾಗೂ ಸಾಗಾಟಗಾರರ ನಿರಂತರ ಸುಲಿಗೆ.
ಈ ಬಗ್ಗೆ ರಾಜ್ಯ ಖನಿಜ ಗಣಿಗಾರಿಕೆ ಅಸೋಸಿಯೇಷನ್ ಪರವಾಗಿ ಅನಿಲ್ ಕೆ. ಕೆಂಬಾರ್ ಈಗಾಗಲೇ ಸರ್ಕಾರ, ವಿವಿಧ ಇಲಾಖೆಗಳಿಗೆ ಪತ್ರವನ್ನು ಬರೆದಿದ್ದರೂ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪಾರದರ್ಶಕವಾಗಿ ನಡೆದುಕೊಳ್ಳುವಂತೆ ಕಾಣಿಸುತ್ತಿಲ್ಲ ಎಂದು ದೂರಿದ್ದಾರೆ.