ಸುರತ್ಕಲ್: “ಇಲ್ಲಿನ ಅಕ್ರಮ ಟೋಲ್ ಗೇಟ್ ಗೆ ಆಡಳಿತ ಪಕ್ಷ ಬಿಜೆಪಿ ಮಾತ್ರ ಕಾರಣವಲ್ಲ, ವಿರೋಧ ಪಕ್ಷದ ನಿಷ್ಕ್ರಿಯತೆಯೂ ಕಾರಣ. 60 ಕಿ.ಮೀ. ವ್ಯಾಪ್ತಿಯಲ್ಲಿ ಮೂರು ಟೋಲ್ ಗೇಟ್ ಗಳಿದ್ದು ಕೇಂದ್ರ ಸರಕಾರ ಟೋಲ್ ರದ್ದು ಮಾಡುವುದಾಗಿ ಹೇಳಿಕೊಂಡು ಬರುತ್ತಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪದೇ ಪದೇ ಗಡುವು ನೀಡುತ್ತಿದ್ದಾರೆ. ಈ ಬಾರಿಯೂ ನ.8ಕ್ಕೆ ಗಡುವು ಮುಕ್ತಾಯಗೊಳ್ಳಲಿದ್ದು ಟೋಲ್ ತೆರವು ಮಾಡದೇ ಇದ್ದರೆ ಜೆಡಿಎಸ್ ನಾಯಕರಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನೂ ಕರೆತಂದು ಇಲ್ಲಿ ಧರಣಿ ಕೂರಿಸುವ ಮೂಲಕ ಉಗ್ರವಾಗಿ ಪ್ರತಿಭಟನೆ ಮಾಡುತ್ತೇವೆ” ಎಂದು ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಹೇಳಿದರು. ಅವರು ಸುರತ್ಕಲ್ ಟೋಲ್ ವಿರೋಧಿ ಸಮಿತಿ ನಡೆಸುತ್ತಿರುವ ಅಹೋರಾತ್ರಿ ಧರಣಿಯನ್ನು ಉದ್ದೇಶಿಸಿ ಮಾತಾಡಿದರು.
“ಸುರತ್ಕಲ್ ಪ್ರದೇಶವು ಕರಾವಳಿಯಲ್ಲೇ ಹೆಚ್ಚು ತೆರಿಗೆ ಸಂಗ್ರಹಿಸುವ ಪ್ರದೇಶವಾಗಿದ್ದು ಇಲ್ಲಿ ವಸೂಲಿ ಆದ ಹಣವನ್ನು ರಾಜ್ಯದ ಬೇರೆ ಜಿಲ್ಲೆಗಳ ಅಭಿವೃದ್ಧಿಗೆ ಬಳಸುತ್ತಿರುವುದು ಖಂಡನೀಯ. ಎಂಆರ್ ಪಿಎಲ್ ನಂತಹ ಕೈಗಾರಿಕೆಗಳಿಂದ ಈ ಭಾಗದಲ್ಲಿ ವಾಯುಮಾಲಿನ್ಯ, ಜಲ ಮಾಲಿನ್ಯದಿಂದ ಜನರಿಗೆ ಕ್ಯಾನ್ಸರ್ ನಂತಹ ಮಾರಕ ರೋಗಗಳು ಹೆಚ್ಚುತ್ತಿವೆ. ಪರಿಸರಕ್ಕೆ ಭಾರೀ ಹಾನಿ ಆಗುತ್ತಿದ್ದರೂ ಇಲ್ಲಿನ ಸಂಸದರು, ಶಾಸಕರು ಮೌನವಹಿಸಿರುವುದು ಆತಂಕಕಾರಿ. 40% ಕಮಿಷನ್ ಪಡೆಯುವ ಸರಕಾರ ಅಲ್ಲಲ್ಲಿ ಟೋಲ್ ನಿರ್ಮಿಸಿ ಜನರ ಹೊಟ್ಟೆಗೆ ಹೊಡೆಯುತ್ತಿದೆ” ಎಂದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕುಂಞ, ಜೆಡಿಎಸ್ ಮಾಜಿ ಕಾರ್ಯಾಧ್ಯಕ್ಷ ಆರ್. ಧನರಾಜ್, ಸುಮತಿ ಎಸ್. ಹೆಗ್ಡೆ, ವಸಂತ ಪೂಜಾರಿ, ಆಜೀಜ್ ಕುದ್ರೋಳಿ, ಅಮರಶ್ರೀ ಅಮರಾನಾಥ್ ಶೆಟ್ಟಿ, ರಾಮ್ ಗಣೇಶ್, ಡಿವೈಎಫ್ ಐ ಮುಖಂಡ ಮುನೀರ್ ಕಾಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.