ಸುರತ್ಕಲ್: ಕರ್ನಾಟಕ ಸರಕಾರ ಕಂದಾಯ ಇಲಾಖೆ ಹಾಗೂ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಇವರ ನೇತೃತ್ವದಲ್ಲಿ ಒಂದೇ ಸೂರಿನಡಿ ಸರಕಾರಿ ಸೇವಾ ಸೌಲಭ್ಯಗಳ ಕುರಿತು
ಸರಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜನಸ್ಪಂದನಾ ಕಾರ್ಯಕ್ರಮ ಬುಧವಾರ ಬೆಳಗ್ಗೆ ಬಂಟರ ಭವನದಲ್ಲಿ ಆರಂಭಗೊಂಡಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಬಳಿಕ ಮಾತಾಡಿದ ಶಾಸಕ ವೈ. ಭರತ್ ಶೆಟ್ಟಿ ಅವರು, “ಕ್ಷೇತ್ರದ ಜನರಿಗಾಗಿ ಎಲ್ಲಾ ಸರಕಾರಿ ಇಲಾಖೆಗಳ ಸಹಯೋಗದಲ್ಲಿ ಜನಸ್ಪಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಂದೇ ಕಡೆ ಜನರಿಗೆ ಲಭ್ಯರಿರುವ ಕಾರಣ ಜನರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಿ. ಈಗಾಗಲೇ ಮಂಗಳೂರು ಉತ್ತರ ಕ್ಷೇತ್ರದ ವಿವಿಧ ಕಡೆಗಳಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಿದ್ದು ಯಶಸ್ವಿಯಾಗಿದೆ. ಪಕ್ಷ, ಜಾತಿ, ಧರ್ಮ ಯಾವುದೇ ಇರಲಿ. ಜನರು ಇಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಂಡಲ್ಲಿ ಆಯೋಜಕರ ಶ್ರಮ ಸಾರ್ಥಕವಾಗುತ್ತದೆ. ಸಾರ್ವಜನಿಕರು ಮತ್ತು ಮಾಧ್ಯಮಗಳು ಹೆಚ್ಚು ಪ್ರಚಾರ ಮಾಡುವ ಮೂಲಕ ಇನ್ನಷ್ಟು ಜನರು ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಹಕ್ಕುಪತ್ರ ವಿತರಣೆ ನಡೆಯಿತು. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಸುರತ್ಕಲ್ ಪಶ್ಚಿಮ 1ನೇ ವಾರ್ಡ್, ಸುರತ್ಕಲ್ ಪೂರ್ವ 2ನೇ ವಾರ್ಡ್, ಕಾಟಿಪಳ್ಳ ಮೂರನೇ ವಾರ್ಡ್, ಕೃಷ್ಣಾಪುರ 4ನೇ ವಾರ್ಡ್, ಕೃಷ್ಣಾಪುರ 5ನೇ ವಾರ್ಡ್, ಮತ್ತು ಇಡ್ಯಾ ಪೂರ್ವ 6ನೇ ವಾರ್ಡ್ ಗಳ ಜನರು ಈ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಸಂಘಟಕರು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸೇವಾ ಸೌಲಭ್ಯ, ಕಾರ್ಮಿಕರಿಗೆ ಸಂಬಂಧಪಟ್ಟ ಕಾರ್ಡ್‌ಗಳ ಸೇವಾ ಸೌಲಭ್ಯ, ಆಹಾರ ಇಲಾಖೆ ಪಡಿತರ ಚೀಟಗೆ ಸಂಬಂಧಪಟ್ಟ
ಸೌಲಭ್ಯ, ಮೀನುಗಾರಿಕೆಗೆ ಸಂಬಂಧಪಟ್ಟ ಸೌಲಭ್ಯ, ಕೃಷಿ ಇಲಾಖೆಗೆ ಸಂಬಂಧಪಟ್ಟ ಸೌಲಭ್ಯ, ತೋಟಗಾರಿಕಾ ಇಲಾಖೆ, ಲೀಡ್‌ಬ್ಯಾಂಕ್ ಸೌಲಭ್ಯ, ಮಹಾನಗರ ಪಾಲಿಕೆಗೆ ಸಂಬಂಧಪಟ್ಟ ಸೌಲಭ್ಯ, ದೇವರಾಜ ಅರರು ನಿಗಮದಲ್ಲಿ ಸಾಲ ಸೌಲಭ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಸುಕನ್ಯಾ ಸಮೃದ್ಧಿ ಯೋಜನೆ, ಪೋಷಣಾ ಅಭಿವೃದ್ಧಿ ಯೋಜನೆ, ಕಿರುಸಾಲ ಯೋಜನೆ, ಬೇಟ ಏಟಾವೋ ಬೇಟಿ ಪಡಾವೋ ಯೋಜನೆಗಳ ಬಗ್ಗೆ ಒಂದೇ ಸೂರಿನಡಿ ಪ್ರಯೋಜನ ಮತ್ತು ಮಾಹಿತಿ ಪಡೆಯಬಹುದಾಗಿದೆ.
ವೇದಿಕೆಯಲ್ಲಿ ಮಂಗಳೂರು ಮೇಯರ್ ಜಯಾನಂದ ಅಂಚನ್, ಮಂಗಳೂರು ಉತ್ತರ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಕಾರ್ಪೋರೇಟರ್ ಗಳಾದ ಲೋಕೇಶ್ ಬೊಳ್ಳಾಜೆ, ಶ್ವೇತಾ ಪೂಜಾರಿ, ಶೋಭಾ ರಾಜೇಶ್, ಸರಿತಾ ಶಶಿಧರ್, ನಾಮ ನಿರ್ದೇಶಿತ ಕಾರ್ಪೋರೇಟರ್ ಪ್ರಶಾಂತ್ ಮೂಡಾಯಿಕೋಡಿ, ಸತೀಶ್ ಮುಂಚೂರು, ಉಪ ತಹಸೀಲ್ದಾರ್ ನವೀನ್, ಲಕ್ಷ್ಮಿ ಶೇಖರ್ ದೇವಾಡಿಗ, ನಯನ ಕೋಟ್ಯಾನ್, ಸುಮಿತ್ರಾ ಕರಿಯ, ವಾಣಿ ಆಳ್ವ, ಪುಷ್ಪರಾಜ್ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು. ಮಹೇಶ್ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು, ಲೋಕೇಶ್ ಬೊಳ್ಳಾಜೆ ಅತಿಥಿಗಳನ್ನು ಸ್ವಾಗತಿಸಿದರು.