
ಮಂಗಳೂರು: ಇಲ್ಲಿನ ಮೀನುಗಾರಿಕಾ ಬಂದರು ರಾಜ್ಯದ ಪ್ರಾಮುಖ್ಯ ಮೀನುಗಾರಿಕಾ ಬಂದರುಗಳಲ್ಲಿ ಒಂದಾಗಿದ್ದು, ಇಲ್ಲಿ ಸಾವಿರಾರು ಬೋಟುಗಳು ಮೀನುಗಾರಿಕೆಯನ್ನು ನಡೆಸುತ್ತಿದ್ದು, ರಾಜ್ಯದ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿರುತ್ತದೆ. ಮೀನುಗಾರಿಕೆಯನ್ನೇ ಅವಲಂಬಿಸಿರುವ ಮೀನುಗಾರರು ಇಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಉಂಟಾಗಿರುತ್ತದೆ. ಇಲ್ಲಿಯ ಅಭಿವೃದ್ಧಿ ಕೆಲಸವು ಮಂದಗತಿಯಲ್ಲಿ ಸಾಗುತ್ತಿರುವುದು ಬೇಸರದ ವಿಷಯವಾಗಿರುತ್ತದೆ ಎಂದು ರಾಜ್ಯ ಪರ್ಸೀನ್ ಮೀನುಗಾರರ ಸಂಘ ಮತ್ತು ಟ್ರಾಲ್ ಬೋಟ್ ಮಾಲಕರ ಸಂಘದ ಪರವಾಗಿ ಕಾಂಗ್ರೆಸ್ ಮೀನುಗಾರಿಕಾ ಘಟಕದ ಅಧ್ಯಕ್ಷ ಚೇತನ್ ಬೆಂಗ್ರೆ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಹೂಳೆತ್ತುವ ಕೆಲಸ ನಡೆಯದೆ ಹಲವು ವರ್ಷಗಳು ಕಳೆದಿದೆ. ಇದರ ಪರಿಣಾಮವಾಗಿ ಬಂದರಿನ ವಿವಿಧ ಭಾಗಗಳಲ್ಲಿ ಹೂಳು ಸಂಗ್ರಹವಾಗಿ, ವಿಶೇಷವಾಗಿ ಅಳಿವೆಬಾಗಿಲು, ಕ್ರಿಕ್ ಪ್ರದೇಶ ಹಾಗೂ ಬೋಟುಗಳು ತಂಗುವ ಸ್ಥಳಗಳು ಬೋಟುಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಅಲ್ಲದೆ ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿರುವುದರಿಂದ ಈಗಾಗಲೇ ಹಲವಾರು ಮೀನುಗಾರಿಕಾ ಬೋಟುಗಳು ಜಖಂಗೊಂಡಿರುತ್ತದೆ ಹಾಗೂ ಮೀನುಗಾರರ ಪ್ರಾಣಹಾನಿಯಾಗಿರುತ್ತದೆ. ಆದುದರಿಂದ ಆದ್ಯತೆಯಲ್ಲಿ ಕೂಡಲೇ ಹೂಳೆತ್ತುವ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು ಎಂದವರು ಆಗ್ರಹಿಸಿದರು.
ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಈಗಾಗಲೇ ಸುಮಾರು 4,000 ಕ್ಕಿಂತಲೂ ಅಧಿಕ ಸಂಖ್ಯೆಯ ಮೀನುಗಾರಿಕಾ ಬೋಟುಗಳು ಕಾರ್ಯಾಚರಿಸುತ್ತಿದ್ದು, ಈಗಿರುವ ಮೀನುಗಾರಿಕಾ ಬಂದರಿನಲ್ಲಿ ಬೋಟುಗಳ ಮೀನು ಇಳಿಸಲು, ಐಸ್ ಹಾಗೂ ಬಲೆ ಸಾಮಾಗ್ರಿಗಳನ್ನು ತುಂಬಿಸಲು ಸ್ಥಳದ ಅನಾನುಕೂಲತೆ ವಿಪರೀತವಾಗಿ ಹೆಚ್ಚಾಗುತ್ತಿದೆ. ಆದುದರಿಂದ ಮಂಗಳೂರು ಮೀನುಗಾರಿಕಾ ಬಂದರಿನ ಭವಿಷ್ಯದ ಅಗತ್ಯತೆಗಳನ್ನು ಪರಿಗಣಿಸಿ ಸಮಗ್ರ ಅಭಿವೃದ್ಧಿ ಮತ್ತು ವಿಸ್ತರಣೆಗೆ ಸಂಬಂಧಿಸಿದಂತೆ ಸೂಕ್ತ ನೀಲಿ ನಕ್ಷೆ ತಯಾರಿಸಿ ಅಗತ್ಯ ಮೂಲ ಸೌಕರ್ಯಗಳನ್ನು ನಿರ್ಮಿಸುವ ಮೂಲಕ ಬಂದರಿನ ಸಮಗ್ರ ಅಭಿವೃದ್ಧಿ ಕಾರ್ಯವನ್ನು ಸರಕಾರವು ತುರ್ತಾಗಿ ಕೈಗೆತ್ತಿಕೊಳ್ಳಬೇಕು.
ನಮ್ಮ ಜಂಟಿ ಸಂಘದ ಹಲವಾರು ವರ್ಷಗಳ ಸತತ ಪ್ರಯತ್ನದ ಫಲವಾಗಿ 1ನೇ ಮತ್ತು 2ನೇ ಹಂತದ ಜೆಟ್ಟಿಗೆ ರೂ. 37.50 ಕೋಟಿ ಹಾಗೂ 3ನೇ ಹಂತದ ಬಂದರಿಗೆ ರೂ. 49.50 ಕೋಟಿ ಅನುದಾನವನ್ನು ಸರ್ಕಾರವು ಈಗಾಗಲೇ ಮಂಜೂರು ಮಾಡಿರುತ್ತದೆ. ಇದು ಸಂತೋಷಕರವಾದ ಸಂಗತಿಯಾಗಿರುತ್ತದೆ. ಇದಕ್ಕಾಗಿ ಸರ್ಕಾರವನ್ನು ಮೀನುಗಾರರ ಪರವಾಗಿ ಅಭಿನಂದಿಸುತ್ತೇವೆ. ಸದ್ರಿ. ಪ್ರಗತಿಯಲ್ಲಿದ್ದರೂ ಈವರೆಗೆ ಪೂರ್ಣಗೊಂಡಿಲ್ಲ. ಇದರಿಂದ ಮೀನುಗಾರರು ದಿನನಿತ್ಯ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮೀನುಗಾರಿಕಾ ಚಟುವಟಿಕೆಗಳು ಹಾಗೂ ಬಂದರಿನ ಕಾರ್ಯ ನಿರ್ವಹಣೆಯ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಆದುದರಿಂದ ತಾವುಗಳು ಈ ವಿಷಯದ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕಾಗಿದೆ.
ಪ್ರಸ್ತುತ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಕಾರ್ಯಾಚರಿಸುತ್ತಿರುವ ಈಗಿನ ಬೋಟುಗಳ ಮೀನುಗಾರಿಕಾ ಚಟುವಟಿಕೆಗೆ ಸ್ಥಳಾವಕಾಶವು ತುಂಬಾ ಕಡಿಮೆ ಇರುವುದರಿಂದ ಸುಮಾರು 800-1000ಮೀ ಉದ್ದದ ಜೆಟ್ಟಿ ಅಗತ್ಯವಿದ್ದು, ಆದಕಾರಣ 3ನೇ ಹಂತದ ಬಂದರಿನಿಂದ ಕೆ.ಎಫ್.ಡಿ.ಸಿ ವರೆಗಿನ 250 ಉದ್ದದ ನೇತ್ರಾವತಿ ತೀರವನ್ನು ಮೀನುಗಾರಿಕಾ ಬಂದರಾಗಿ ನಿರ್ಮಾಣ ಮಾಡುವ ಅಗತ್ಯವಿರುತ್ತದೆ.

ರಖಂ ಮತ್ತು ಕಮಿಶನ್ ಮೀನು ಮಾರಾಟವನ್ನು ಬಂದರಿನ ಒಳಭಾಗದಲ್ಲಿ ನಡೆಸುತ್ತಿರುವುದರಿಂದ ಬೇರೆ ರಾಜ್ಯಗಳಿಂದ ಬರುವ 200ಕ್ಕೂ ಹೆಚ್ಚಿನ ವಾಹನಗಳಿಂದ ವ್ಯರ್ಥ ದಟ್ಟನೆ ಉಂಟಾಗುತ್ತಿದ್ದು. ಈ ಮಾರುಕಟ್ಟೆಯನ್ನು ಮೀನುಗಾರಿಕಾ ಕಾಲೇಜಿಗೆ ಸೇರಿರುವ 3 ಎಕ್ರೆ ಜಾಗೆಗೆ ಸ್ಥಳಾಂತರ ಮಾಡಿ ಹಾಲಿ ಬಂದರಿನ ದಟ್ಟಣೆಯನ್ನು ಕಡಿಮೆ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು. ಮೀನುಗಾರಿಕೆಯ ಅಭಿವೃದ್ಧಿ ಹಾಗೂ ಮೀನುಗಾರರ ಹಿತದೃಷ್ಟಿಯಿಂದ ಕೈಗೊಂಡಿರುವ ಈ ನಿರ್ಣಯಗಳಿಗೆ ತಾವು ಆದಷ್ಟು ಶೀಘ್ರವಾಗಿ ಸಕಾರಾತ್ಮಕವಾಗಿ ಸ್ಪಂದಿಸಿ ಮೀನುಗಾರರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.