
ಮಂಗಳೂರು: ಅಸೂಯೆ, ದ್ವೇಷ, ಬೇಡವಾದ ವಿಚಾರಗಳು ನಮ್ಮನ್ನು ಸಣ್ಣವರನ್ನಾಗಿ ಮಾಡುತ್ತವೆ. ಎಲ್ಲ ಧರ್ಮಗಳ ಸಾರ ಕೂಡ ಮನುಷ್ಯನಿಗೆ ಒಳಿತು ಮಾಡುವುದಾಗಿದೆ. ಯಾರನ್ನೂ ದ್ವೇಷಿಸಬಾರದು. ಮುಂಡಾಲ ಸಮಾಜದ ಎಲ್ಲರನ್ನೂ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಬೇಕು. ಸ್ವಾರ್ಥದಿಂದ ತುಂಬಿರುವ ಈ ಜಗತ್ತಿನಲ್ಲಿ ಉಳಿದವರ ಒಳ್ಳೆಯದನ್ನು ಬಯಸಬೇಕಾಗಿದೆ. ಇತರ ಸಮುದಾಯದವರೊಂದಿಗೂ ಪ್ರಿತಿ ವಿಶ್ವಾಸದಿಂದ ಇರಬೇಕು. ಆ ಸಮುದಾಯದ ಸಾಧಕರು ಪ್ರೇರಣೆಯಾಗಬೇಕು. ಕಾಲೆಳೆಯುವ ಬದಲು ಕೈ ಹಿಡಿದು ಮೇಲೆತ್ತುವ ಕೆಲಸವಾಗಬೇಕು. ದ್ವೇಷಕ್ಕಿಂತ ಪ್ರೀತಿ ಮುಖ್ಯ. ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಚಿತ್ರದುರ್ಗದ ಶ್ರೀ ಆದಿಜಾಂಬವ ಮಹಾಸಂಸ್ಥಾನ ಮಠದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಮುಂಡಾಲ ಮಹಾಸಭಾ ದ.ಕ ಜಿಲ್ಲೆ ವತಿಯಿಂದ ರವಿವಾರದಂದು ಲಾಲ್ ಬಾಗ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಭಾಂಗಣದಲ್ಲಿ ನಡೆದ ಮುಂಡಾಲ ಮಹಾಸಭಾ ದ.ಕ ಜಿಲ್ಲಾ ಸಮಿತಿಯ ಪದಗ್ರಹಣ ಸಮಾರಂಭ ಹಾಗೂ ಮುಂಡಾಲ ಸಮುದಾಯದ ಸ್ನೇಹ ಸಂಗಮ ಮತ್ತು ಸಮ್ಮಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನದ ಧರ್ಮದರ್ಶಿ ಹಾಗೂ ಶ್ರೀ ಮಾಲ್ತಿದೇವಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಗೋಕುಲ್‌ದಾಸ್ ಬಾರ್ಕೂರು ಅವರು, ಸಂಘಟನೆಯ ಉದ್ದೇಶ ಈಡೇರಿಕೆಗಾಗಿ ಎಲ್ಲರೂ ಕೈ ಜೋಡಿಸಿ. ವಿಶಾಲ ಕಲ್ಪನೆಯಲ್ಲಿ ಸಮುದಾಯಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು. ಬಬ್ಬುಸ್ವಾಮಿಯ ಸೇವೆ ಮಾಡುವವರು ಆಡಳಿತಕ್ಕೂ ಆತ್ಮಸ್ತೈರ್ಯ ಬೆಳೆಸಿಕೊಳ್ಳಬೇಕು. ನಾಯಕತ್ವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವ ರಮಾನಾಥ ರೈ, ಮೂಡ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪಾಲ್ಗೊಂಡಿದ್ದರು. ಮುಂಡಾಲ ಮಹಾಸಭಾದ ದ.ಕ ಜಿಲ್ಲಾ ಅಧ್ಯಕ್ಷ ಶಿವಪ್ಪ ನಂತೂರು ಅಧ್ಯಕ್ಷತೆ ವಹಿಸಿದ್ದರು. ನಂತೂರಿನಲ್ಲಿ ಮುಂಡಾಲ ಮಹಾಸಭಾ ಜಿಲ್ಲಾ ಕಚೇರಿಯನ್ನು ಸಂತೋಷ್ ಕುಮಾರ್ ಬಜ್ಪೆ ಉದ್ಘಾಟಿಸಿದರು. ಮೆರವಣಿಗೆಗೆ ಮುಂಡಾಲ ಮಹಾಸಭಾದ ಗೌರವಾಧ್ಯಕ್ಷ ಟಿ. ಸದಾಶಿವ ಕುಂದರ್ ಹಾಗೂ ವೆಂಕಟೇಶ ಅಶೋಕ ನಗರ ಚಾಲನೆ ನೀಡಿದರು. ಹರೀಶ್ ಜೆ. ಕೊಲಕಾಡಿ ಬೆಂಗಳೂರು ಅವರು ಲಾಂಛನ ಅನಾವರಣಗೊಳಿಸಿದರು.
ವಿವಿಧ ಮುಂಡಾಲ ಸಂಘಟನೆಗಳ ಪ್ರಮುಖರಾದ ರಘುವೀರ್ ಬಾಬುಗುಡ್ಡ, ಶಿವರಾಜ್ ಮಲ್ಲಾರ್ ಕಾಪು, ವೈ.ಜಿ ಸುರೇಶ್ ಚಿಕ್ಕಮಗಳೂರು, ಶಂಕರ್ ಪದಕಣ್ಣಾಯ, ವಿಜಯ ಕುಮಾರ್ ಚಿಕ್ಕಮಗಳೂರು, ಮಂಜುನಾಥ ಶೃಂಗೇರಿ, ಸಂಕೇಶ್ವರ ಮೂಡಿಗೆರೆ, ಮಂಜುನಾಥ ಕರ್ಕೇರ ಪಡುಬಿದ್ರಿ, ಜಯಂತ್ ಕೊಳಂಬೆ, ಉಮೇಶ್ ಕುಮಾರ್ ಬಿಜೈ ಕಾಪಿಕಾಡ್, ಚಂದ್ರಶೇಖರ್ ಮಂಗಳೂರು, ಶಂಕರ್ ಮೂಡಿಗೆರೆ, ಆಕಾಶ್ ಕೊಟ್ಯಾನ್ ಉಡುಪಿ ಹಾಗೂ ವಿಶೇಷ ಆಹ್ವಾನಿತರಾಗಿ ಪೂವಪ್ಪ ಗುರಿಕಾರರು, ಪ್ರವೀಣ್ ಚಂದ್ರ ಕರ್ಕೇರ, ಪ್ರೇಮ ರಾಜೇಶ್ ಕುಚ್ಚಿಕಾಡ್, ಶಶಿರೇಖಾ ಉದಯ ಕುಮಾರ್, ವಸಂತಿ ಜಯಪ್ರಕಾಶ್, ಪ್ರೇಮ ಕೋಟ್ಯಾನ್, ರಾಜಶ್ರೀ ಹಾಗೂ ವಿವಿಧ ಕ್ಷೇತ್ರದ ಗುರಿಕಾರರು, ಸಂಘಟನೆಯ ಪ್ರಮುಖರು ಪಾಲ್ಗೊಂಡಿದ್ದರು. ಮುಂಡಾಲ ಸಮುದಾಯದ ವಧು-ವರರ ಅನ್ವೇಷಣಾ ಮಾಹಿತಿ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಜತೆ ಕಾರ್ಯದರ್ಶಿ ವಿನೋದ್ ಆಳ್ವ ಮಧ್ಯ ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರ್ವಹಿಸಿದರು.
