
ಮಂಗಳೂರು: ತುಳುನಾಡಿನಲ್ಲಿ ತುಳು ಸಂಘಟನೆ, ಸಾಹಿತ್ಯ ಪ್ರಕಟನೆ, ಸಾಹಿತ್ಯ ಸಮ್ಮೇಳನ, ತುಳು ಭಾಷೆ ಸಾಹಿತ್ಯಕ್ಕೆ ಸಂಬಂಧಿಸಿದ ಸಾವಿರಾರು ಕಾಯಕ್ರಮಗಳನ್ನು ಸಂಘಟಿಸಿ, ಜನಮ್ನಣೆ ಗಳಿಸಿದವರು ಬಿ.ದಾಮೋದರ ನಿಸರ್ಗರು. ತನ್ನ ತಂದೆಯವರಾದ ಬಿ. ದೋಗ್ರ ಪೂಜಾರಿಯವರ ಸ್ಮರಣಾರ್ಥ ಯಕ್ಷಗಾನ ಕೇಂದ್ರವನ್ನು ಸ್ಥಾಪಿಸಿ ಯಕ್ಷಲೋಕಕ್ಕೆ ಅಪೂರ್ವ ಕಾಣಿಕೆ ನೀಡಿದವರು.
ಬಿ. ದಾಮೋದರ ನಿಸರ್ಗರು ನಮ್ಮನ್ನಗಲಿದರೂ ಅವರು ತುಳು ಭಾಷೆ ಸಂಸ್ಕೃತಿಗೆ ನೀಡಿದ ಸೇವೆ ಮುಂದುವರಿಯಬೇಕು. ಅವರ ಹೆಸರು ತುಳುನಾಡಿನ ನಿಸರ್ಗದಲ್ಲಿ ಹಸುರಾಗಿರಬೇಕು ಎಂಬ ಮೂಲ ಉದ್ದೇಶದಿಂದ ದಾಮೋದರ ನಿಸರ್ಗ ತುಳು ಪ್ರತಿಷ್ಠಾನವನ್ನು ಸ್ಥಾಪಿಸಿ ಆ ಮೂಲಕ ಸಾಹಿತ್ಯ, ಸಂಸ್ಕೃತಿ ಸಂಬಂಧಿ ಕಾಠ್ಯಕ್ರಮಗಳನ್ನು ಸಂಘಟಿಸುವುದು ಮತ್ತು ಅವರ ಪುಣ್ಯ ಸ್ಮರಣೆಯ ದಿನದಂದು ತುಳು ಭಾಷೆ ಸಂಸ್ಕೃತಿಗೆ ವಿಶೇಷ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸುವುದು ಪ್ರತಿಷ್ಠಾನದ ಉದ್ದೇಶವಾಗಿದೆ ಎಂದು ದಾಮೋದರ ನಿಸರ್ಗ ತುಳು ಪ್ರತಿಷ್ಠಾನ ಕುಡ್ಲ ಇದರ ಸಮಿತಿ ಸದಸ್ಯ ವರ್ಕಾಡಿ ರವಿ ಅಲೆವೂರಾಯ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ದಾಮೋದರ ನಿಸರ್ಗ ಅವರು ದ.ಕ. ಉಡುಪಿ ಜಿಲ್ಲೆಗಳಲ್ಲಿ ಯಾವುದೇ ದೇವಸ್ಥಾನ, ದೈವಸ್ಥಾನಗಳಿಗೆ, ಧಾರ್ಮಿಕ ಸಮಾರಂಭಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದವರು. ಕುಡ್ಲ ತುಳು ಕೂಟದ ಅಧ್ಯಕ್ಷರಾಗಿ ನಾಲ್ಕೂವರೆ ದಶಕಗಳಿಂದ ಯಶಸ್ವೀ ಸೇವೆಯನ್ನು ಸಲ್ಲಿಸಿದವರು. ಅವರ ಸ್ಮರಣೆಗಾಗಿ 2026ರ ಗೌರವ ಪುರಸ್ಕಾರವನ್ನು ದಾಮೊದರ ನಿಸರ್ಗರ ಆತ್ಮೀಯರೂ ತುಳು ಸಾಹಿತ್ಯ ಲೋಕದ ಅಗ್ರಗಣ್ಯರೂ, ವಿಶ್ರಾಂತಿ ಕುಲಪತಿಗಳೂ ಆಗಿರುವ ಪ್ರೊ. ಬಿ.ಎ. ವಿವೇಕ ರೈಯವರಿಗೆ ನೀಡುವುದೆಂದು ತೀರ್ಮಾನಿಸಲಾಗಿದೆ ಎಂದರು.

ನಿಸರ್ಗ ಗೌರವ ಪುರಸ್ಕಾರ 2026ರ ಸಮಾರಂಭವು ಆ.30ರಂದು ಸಂಜೆ ಗಂಟೆ 4ರಿಂದ ಕಂಕನಾಡಿ ಗರಡಿಯ ಸರ್ವಮಂಗಳ ಸಭಾಂಗಣದಲ್ಲಿ ನಡೆಯಲಿದೆ. ಕೆ. ಚಿತ್ತರಂಜನ್, ಅಧ್ಯಕ್ಷರು, ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಕಂಕನಾಡಿ ಇವರು ಉದ್ಘಾಟಕರಾಗಿರುತ್ತಾರೆ. ಮುಖ್ಯ ಅತಿಥಿಗಳಾಗಿ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು, ವರ್ಧಮಾನ್ ದುರ್ಗಪ್ರಸಾದ್ ಶೆಟ್ಟಿ, ಎ. ಸಿ. ಭಂಡಾರಿ ಭಾಗವಹಿಸಲಿದ್ದಾರೆ. ನಿಸರ್ಗರ ಸಂಸ್ಮರಣಾ ನುಡಿಗಳನ್ನು ಯಕ್ಷ ಗುರುಗಳಾದ ವರ್ಕಾಡಿ ರವಿ ಅಲೆವೂರಾಯ ನಡೆಸಲಿದ್ದಾರೆ. ಅಭಿನಂದನಾ ನುಡಿಗಳನ್ನು ಜಾನಪದ ವಿದ್ವಾಂಸರಾದ ಡಾ। ಗಣೇಶ್ ಅಮೀನ್ ಸಂಕಮಾರ್ ಇವರು ನಡೆಸಿಕೊಡಲಿದ್ದಾರೆ. ಸಭಾ ನಿರ್ವಹಣೆಯನ್ನು ದಯಾನಂದ ಕಟೀಲ್ ಇವರು ನಡೆಸಲಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ| ಹರಿಕೃಷ್ಣ ಪುನರೂರು, ಡಾ| ವಿನ್ಯಾಸ ನಿಸರ್ಗ, ಡಾ| ಮೇಘ ತ್ರಿದೇವ್, ದಯಾನಂದ ಕಟೀಲು, ಅಶೋಕ ಬಿ. ಎನ್. ಮತ್ತಿತರರು ಉಪಸ್ಥಿತರಿದ್ದರು.
