
ಮಂಗಳೂರು: ಇಬ್ಬರು ಯುವತಿಯರಿಗೆ ಕಿರುಕುಳ, ಮಾನಸಿಕ ಹಿಂಸೆ ಹಾಗೂ ಜೀವ ಬೆದರಿಕೆ ನೀಡಿದ ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ಯುವತಿ ಆಗ್ರಹಿಸಿದ್ದಾರೆ.
ನಗರದ ವಿಶ್ವಶ್ರೀ ಕಾರ್ಯಾಲಯದಲ್ಲಿ ಗುರುವಾರ ನಡೆದ ಮಾತನಾಡಿದ ಅವರು, ತಾನು ನೀರುಮಾರ್ಗದ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ಕೆಲಸ ಮಾಡುತ್ತಿದ್ದು, ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಯುವತಿ ಹಾಗೂ ಉಜಿರೆಯ ನೌಷದ್ ಕಳೆದ ಮೂರು ವರ್ಷಗಳಿಂದ ಪರಸ್ಪರ ಪರಿಚಯ ಹೊಂದಿದ್ದರು. ಇತ್ತೀಚೆಗೆ ಇಬ್ಬರ ನಡುವೆ ವೈಮನಸ್ಸು ಉಂಟಾದ ಬಳಿಕ ನೌಷದ್ ಯುವತಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಿದರು.
ಕೆಲ ದಿನಗಳ ಹಿಂದೆ ಯುವತಿ ಹಾಗೂ ಆಕೆಯ ಸ್ನೇಹಿತೆ ತಮ್ಮ ಮನೆಗೆ ಬಂದಿದ್ದ ಸಂದರ್ಭದಲ್ಲಿ, ಯುವತಿ ತನ್ನ ಸ್ಥಳದ ಮಾಹಿತಿ ನೌಷದ್‌ಗೆ ಕಳುಹಿಸಿದ್ದಾಳೆ. ಬಳಿಕ ಆತ ಮನೆಗೆ ಬಂದು ಯುವತಿ ಹಾಗೂ ಮನೆಯವರೊಂದಿಗೆ ಗಲಾಟೆ ಮಾಡಿದ್ದಾನೆ ಎಂದು ಅವರು ತಿಳಿಸಿದರು.
ಈ ಕುರಿತು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಿರುಕುಳ ಹಾಗೂ ಮಾನಸಿಕ ಹಿಂಸೆ ಆರೋಪದಡಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ. ದೂರು ದಾಖಲಾದ ಬಳಿಕ ನೌಷದ್ ಕರೆ ಮಾಡಿ ತಮಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲೂ ಜೀವ ಬೆದರಿಕೆ ದೂರು ನೀಡಲಾಗಿದೆ ಎಂದು ಹೇಳಿದರು.
ಇಷ್ಟಕ್ಕೆ ನಿಲ್ಲದೆ, ತಾವು ಮೂವರು ಆಸ್ಪತ್ರೆಗೆ ಕೆಲಸಕ್ಕೆ ತೆರಳಿದ್ದ ವೇಳೆ 3-4 ಮಂದಿ ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ಆಸ್ಪತ್ರೆಯ ಆಡಳಿತ ಮಂಡಳಿ ಕೆಲಸಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಹೇರಿದೆ. ಘಟನೆಗಳಿಂದ ಬೇಸತ್ತ ಯುವತಿ ತನ್ನ ಊರಿಗೆ ತೆರಳಿದ್ದಾಳೆ. ಯಾವುದೇ ತಪ್ಪು ಮಾಡದ ತಾವು ಅನಗತ್ಯವಾಗಿ ಸಂಕಷ್ಟ ಅನುಭವಿಸುತ್ತಿದ್ದೇವೆ ಎಂದು ಸಂತ್ರಸ್ತ ಯುವತಿ ಅಳಲು ತೋಡಿಕೊಂಡರು.
ಮಹಿಳಾ ಠಾಣೆಯಲ್ಲಿ ಕಿರುಕುಳ ಹಾಗೂ ಮಾನಸಿಕ ಹಿಂಸೆ ಪ್ರಕರಣ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ, ಪೊಲೀಸರು ಆರೋಪಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ತಮ್ಮ ಹಾಗೂ ಇತರ ಸಂತ್ರಸ್ತರಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಯುವತಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಪ್ರಾಂತ ಪ್ರಚಾರಕ್ ಪ್ರದೀಪ್ ಸರಿಪಲ್ಲ, ಮಾತೃಶ್ರೀ ಮಂಡಳಿಯ ಸುಕನ್ಯ ರಾವ್, ಸುಜಾತಾ ಹಾಗೂ ಸಂಯೋಜಕ ಪ್ರೀತಂ ಉಪಸ್ಥಿತರಿದ್ದರು.
