ಕೊಂಕಣಿ ಭಾಷೆಯ ಉಳಿವು ಯುವಜನತೆಯ ಹೊಣೆ –ಸೀಮಾ ಪ್ರಭು ಎಸ್.

ಮಂಗಳೂರು: ಕೊಂಕಣಿ ಭಾಷೆಯ ಶ್ರೀಮಂತ ಪರಂಪರೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಯುವಜನತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಕೆನರಾ ಕಾಲೇಜು ಸ್ವಾಯತ್ತ ಮಂಗಳೂರು ಇಲ್ಲಿಯ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಸೀಮಾ ಪ್ರಭು ಎಸ್. ಹೇಳಿದರು.
ಇಲ್ಲಿನ ರತ್ನಾ ಎಸ್. ಶೆಣೈ ಸ್ಮಾರಕ ಸಭಾಂಗಣದಲ್ಲಿ ನಡೆದ ಕೊಂಕಣಿ ಮಾನ್ಯತಾ ದಿವಸ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೊಂಕಣಿ ಭಾಷೆ ತನ್ನದೇ ಆದ ವಿಶಿಷ್ಟ ಇತಿಹಾಸ, ಸಾಹಿತ್ಯಿಕ ಶ್ರೀಮಂತಿಕೆ ಹಾಗೂ ಸಾಂಸ್ಕೃತಿಕ ವೈವಿಧ್ಯವನ್ನು ಹೊಂದಿದೆ. ಹಲವು ಪ್ರದೇಶಗಳಲ್ಲಿ ವಿವಿಧ ಸಮುದಾಯಗಳ ನಡುವೆ ಬಳಕೆಯಲ್ಲಿರುವ ಕೊಂಕಣಿ ಭಾಷೆ ತನ್ನ ವೈಶಿಷ್ಟ್ಯವನ್ನು ಉಳಿಸಿಕೊಂಡು ಬೆಳೆದಿರುವುದು ಗಮನಾರ್ಹ. ಯುವಜನತೆ ಭಾಷೆಯನ್ನು ಕಲಿತು, ಮಾತನಾಡಿ, ಬರವಣಿಗೆಯಲ್ಲಿ ಬಳಸುವ ಮೂಲಕ ಅದರ ಜೀವಂತಿಕೆಯನ್ನು ಕಾಪಾಡಬೇಕು ಎಂದು ಹೇಳಿದರು. ಮಾತೃಭಾಷೆಯ ಮೇಲಿನ ಪ್ರೀತಿ ಮತ್ತು ಅಭಿಮಾನವನ್ನು ಬೆಳೆಸಿಕೊಂಡು ಅದರ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದು ಅವರು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರೇಮಲತಾ ವಿ. ಅವರು ಕೊಂಕಣಿ ಮಾನ್ಯತಾ ದಿವಸದ ಶುಭಾಶಯಗಳನ್ನು ಸಲ್ಲಿಸಿ, ಭಾಷೆಯ ಉಳಿವು ಕೇವಲ ಆಚರಣೆಗಳಿಂದ ಸಾಧ್ಯವಿಲ್ಲ. ಭಾಷೆಯನ್ನು ದೈನಂದಿನ ಬದುಕಿನಲ್ಲಿ ಪ್ರಾಯೋಗಿಕವಾಗಿ ಬಳಸಿದಾಗ ಮಾತ್ರ ಅದು ಜೀವಂತವಾಗಿರಲು ಸಾಧ್ಯ. ವಿದ್ಯಾರ್ಥಿಗಳು ಕೊಂಕಣಿ ಭಾಷೆಯನ್ನು ಮಾತನಾಡುವ ಹಾಗೂ ಬಳಸುವ ಮೂಲಕ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ಹೇಳಿದರು.

Advt

ಕಾರ್ಯಕ್ರಮದ ಸಂಯೋಜಕರಾದ ಸುಜಾತಾ ಜಿ. ನಾಯಕ್ ಅವರು ಉಪಸ್ಥಿತರಿದ್ದರು. ಕೊಂಕಣಿ ಭಾಷಾ ವಿದ್ಯಾರ್ಥಿ ಮಂಡಳಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಕೊಂಕಣಿ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದರೊಂದಿಗೆ ಮಾತೃಭಾಷೆಯ ಬಗ್ಗೆ ಅಭಿಮಾನ ಮತ್ತು ಜಾಗೃತಿಯನ್ನು ಬೆಳೆಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.

error: Content is protected !!