ಮಂಗಳೂರಿನಲ್ಲಿ ಆ.24ರಿಂದ 28ರವರೆಗೆ ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಾಗ

ಮಂಗಳೂರು: ಲೋಕಕಲ್ಯಾಣ, ಧರ್ಮ ಸಂವರ್ಧನೆ, ಶಾಂತಿ, ಸಮೃದ್ಧಿ ಹಾಗೂ ಸರ್ವಜನ ಕ್ಷೇಮದ ಸಂಕಲ್ಪದೊಂದಿಗೆ ಜಗದಾಚಾರ್ಯ ಸ್ವಾಮಿ ಅಖಿಲೇಶ್‌ಜೀ ಮಹಾರಾಜ್ ಸೇವಾ ಸಂಸ್ಥಾನ,ಮತ್ತು ದಿ ಸ್ಯಾಫುನ್ ಫ್ರಂಟ್ ಇದರ ಸಹಯೋಗದೊಂದಿಗೆ ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಾಗವನ್ನು ಆಗಸ್ಟ್ 24ರಿಂದ 28ರವರೆಗೆ ಮಂಗಳೂರಿನ ಶ್ರೀ ಯೋಗೇಶ್ವರ ಕದ್ರಿ ಮಠದಲ್ಲಿ ಆಯೋಜಿಸಲಾಗಿದೆ
ದಕ್ಷಿಣ ಕನ್ನಡದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಈ ಮಹಾಯಾಗವು ಆಚಾರ್ಯ ಶ್ರೀ ಲವ್‌ಕುಶ್ ಮಿಶ್ರಾಜೀ, ವಿಂದ್ಯಾಚಲ್, ವಾರಣಾಸಿ, ಉತ್ತರಪ್ರದೇಶ ಅವರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಲಿದೆ.
ಶ್ರೀ ಮಹಾಲಕ್ಷ್ಮೀ ಸಮೃದ್ಧಿಯ ಪ್ರತೀಕವಾಗಿದ್ದು, ಶ್ರೀಮನ್ನಾರಾಯಣನು ಧರ್ಮ ಸಂರಕ್ಷಣೆ ಹಾಗೂ ಲೋಕಕಲ್ಯಾಣದ ದೈವಿಕ ಸ್ವರೂಪವಾಗಿದ್ದಾರೆ. ಯಾವುದೇ ಜಾತಿ ಭೇದವಿಲ್ಲದೆ, ಎಲ್ಲಾ ವರ್ಗ ಮತ್ತು ವರ್ಣಗಳ ಜನರು ಒಗ್ಗೂಡಿ, ಶೌರ್ಯಕರ್ಮದ ನಂತರ ಶುದ್ದೀಕರಣ ವಿಧಿಯನ್ನು ನೆರವೇರಿಸಿ, ಎಲ್ಲರನ್ನೂ ಯಜ್ಞದಲ್ಲಿ ಭಾಗವಹಿಸಲು ಸಿದ್ಧಗೊಳಿಸಲಾಗುವುದು. ಕುಟುಂಬಗಳಲ್ಲಿ ಶಾಂತಿ, ಸೌಹಾರ್ದ, ಆರೋಗ್ಯ, ಸದ್ಭಾವನೆ ಮತ್ತು ಸಮೃದ್ಧಿ ನೆಲೆಸುವುದರೊಂದಿಗೆ ಸಮಾಜದಲ್ಲಿ ಧಾರ್ಮಿಕ ಹಾಗೂ ಸಾತ್ವಿಕ ವಾತಾವರಣ ನಿರ್ಮಾಣವಾಗಲಿ ಎಂಬ ಉದ್ದೇಶದಿಂದ ಈ ಮಹಾಯಾಗವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


ಯಾಗದ ವಿಶೇಷತೆ ಏನೆಂದರೆ ಜಾತಿ ಭೇದವಿಲ್ಲದೆ ಶ್ರೇಷ್ಠ ಕನಿಷ್ಠ ತಾರತಮ್ಯವಿಲ್ಲದೆ ಆಚಾರ್ಯರು ಕೊಟ್ಟ ದೀಕ್ಷೆ ಹಾಗು ಯಜ್ಯೋಪವಿತ ವಸ್ತ್ರಾದಿಗಳನ್ನು ತೊಟ್ಟು ಈ ಮಹಾ ಕಾರ್ಯದಲ್ಲಿ ಭಾಗವಹಿಸುವುದು
ಯಜ್ಞವು ಭಾರತೀಯ ಸನಾತನ ಸಂಸ್ಕೃತಿಯ ಅತ್ಯಂತ ಪ್ರಾಚೀನ ವೈದಿಕ ಪರಂಪರೆಗಳಲ್ಲಿ ಒಂದಾಗಿದ್ದು, ತ್ಯಾಗ, ಸಮರ್ಪಣೆ, ಶ್ರದ್ದೆ ಮತ್ತು ಲೋಕಕಲ್ಯಾಣ ಇದರ ಪ್ರಮುಖ ಆಶಯಗಳಾಗಿವೆ. ಪ್ರಸ್ತುತ ಕಾಲಘಟ್ಟದಲ್ಲಿ ವೈದಿಕ ಸಂಸ್ಕೃತಿ ಮತ್ತು ಯಜ್ಞ ಪರಂಪರೆಯ ಮಹತ್ವವನ್ನು ಜನರಿಗೆ ಪರಿಚಯಿಸುವ ಉದ್ದೇಶವೂ ಈ ಮಹಾಯಾಗದ ಹಿಂದಿದೆ.

ಕಳಶಯಾತ್ರೆ
ಮಹಾಯಾಗದ ಆರಂಭದ ಅಂಗವಾಗಿ ಆಗಸ್ಟ್ 24ರಂದು ಬೆಳಗ್ಗೆ 8 ಗಂಟೆಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಶ್ರೀ ಯೋಗೇಶ್ವರ ಕದ್ರಿ ಮಠದವರೆಗೆ ಕಳಶಯಾತ್ರೆ ನಡೆಯಲಿದೆ. ನಂತರ ಐದು ದಿನಗಳ ಕಾಲ ಯಾಗದ ವಿವಿಧ ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳು ನಡೆಯಲಿವೆ.
ಮಹಾಯಾಗದ ಸಂದರ್ಭದಲ್ಲಿ ಹೋಮ-ಹವನಗಳು, ಮಂತ್ರಪಠಣ, ಪೂಜಾ ವಿಧಿವಿಧಾನಗಳು ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಆಗಸ್ಟ್ 28ರಂದು ಪೂರ್ಣಾಹುತಿ ನೆರವೇರಲಿದೆ.
ಮಹಾಯಾಗದಲ್ಲಿ ಭಕ್ತರು ಕುಟುಂಬ ಸಮೇತರಾಗಿ ಭಾಗವಹಿಸಿ, ಶ್ರೀ ಲಕ್ಷ್ಮೀನಾರಾಯಣರ ಅನುಗ್ರಹ ಹಾಗೂ ಪೂಜ್ಯ ಗುರುಗಳ ಆಶೀರ್ವಾದ ಪಡೆದು ಈ ಪುಣ್ಯಕಾರ್ಯವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Screenshot

ಆಯೋಜಕರು: ಜಗದಾಚಾರ್ಯ ಸ್ವಾಮಿ ಅಖಿಲೇಶ್‌ಜೀ ಮಹಾರಾಜ್ ಸೇವಾ ಸಂಸ್ಥಾನ, ಮಂಗಳೂರು
ಪೌರೋಹಿತ್ಯ: ಆಚಾರ್ಯ ಶ್ರೀ ಲವ್‌ಕುಶ್‌ ಮಿಶ್ರಾಜೀ, ವಿಂದ್ಯಾಚಲ್‌, ವಾರಣಾಸಿ, ಉತ್ತರಪ್ರದೇಶ.
“ಲೋಕಾಃ ಸಮಸ್ತಾಃ ಸುಖಿನೋ ಭವಂತು” ಎಂಬ ಮಹಾಸಂಕಲ್ಪದೊಂದಿಗೆ ನಡೆಯಲಿರುವ ಈ ಮಹಾಯಾಗದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಸ್ಥೆಯು ಕೋರಿದೆ.

error: Content is protected !!