ಕಾಸರಗೋಡಿನಲ್ಲಿ ಎಚ್‌1ಎನ್‌1 ವೈರಸ್ ಗೆ ಗೃಹಿಣಿ ಬಲಿ! ಮಂಗಳೂರಿನಲ್ಲೂ ಆತಂಕ!!

ಕಾಸರಗೋಡು: ಜಿಲ್ಲೆಯಲ್ಲಿ ಎಚ್‌1ಎನ್‌1 ವೈರಸ್ ಜ್ವರದ ಭೀತಿ ತೀವ್ರಗೊಂಡಿದ್ದು, ತೀವ್ರ ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ಗೃಹಿಣಿಯೊಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.

ಅಜನೂರು ಮಾಣಿಕೊಟ್ಟೆಯ ವಾಸಿ ಯಶೋಧಾ (ಗೃಹಿಣಿ) ಮೃತಪಟ್ಟ ದುರ್ದೈವಿ. ಕೆಲವು ದಿನಗಳ ಹಿಂದೆ ತೀವ್ರ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮೊದಲು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆರೋಗ್ಯ ಸ್ಥಿತಿ ಹದಗೆಟ್ಟು ಎಚ್‌1ಎನ್‌1 ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯೊಪ್ಪಿದ್ದಾರೆ.

ಸಂಪರ್ಕದಲ್ಲಿದ್ದವರಲ್ಲಿಯೂ ಲಕ್ಷಣ:
ಮೃತ ಯಶೋಧಾ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬದ ಸದಸ್ಯರು ಸೇರಿದಂತೆ ಒಟ್ಟು ಏಳು ಜನರಲ್ಲಿ ಪ್ರಸ್ತುತ ಜ್ವರ ಮತ್ತು ಕೆಮ್ಮಿನ ಲಕ್ಷಣಗಳು ಕಾಣಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ತಂಡವು ಅವರ ಗಂಟಲಿನ ದ್ರವದ ಮಾದರಿಗಳನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದೆ.

ಆರೋಗ್ಯ ಇಲಾಖೆಯಿಂದ ನಿಗಾ ಮತ್ತು ಎಚ್ಚರಿಕೆ:
ಘಟನೆಯ ಗಂಭೀರತೆಯನ್ನು ಪರಿಗಣಿಸಿ ಆರೋಗ್ಯ ಇಲಾಖೆಯು ಅಜನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಿದೆ. ಸಾರ್ವಜನಿಕರು ಮುನ್ನೆಚ್ಚರಿಕೆಯಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮತ್ತು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಇಲಾಖೆ ಮನವಿ ಮಾಡಿದೆ. ಗಡಿ ಜಿಲ್ಲೆ ಕಾಸರಗೋಡಿನಲ್ಲಿ ಈ ವೈರಸ್‌ನ ಹಬ್ಬುವಿಕೆ ನೆರೆಯ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿಯೂ ಆತಂಕ ಮೂಡಿಸಿದೆ.

error: Content is protected !!