ಮೃತ್ಯು ಕೂಪವಾಯ್ತು ಮುತ್ತತ್ತಿ, ಕಾವೇರಿ ಒಡಲು ಸೇರಿದ ಒಂದೇ ಕುಟುಂಬದ ಐವರು!

ಮಂಡ್ಯ: ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣದ ಬ್ಯಾಡರಹಳ್ಳಿ ಮೂಲದ ರವಿ ಕುಟುಂಬ, ತರಕಾರಿ ವ್ಯಾಪಾರ ಮಾಡಿಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ರು. ನಿನ್ನೆ ಬಾಡಿಗೆಗೆ ಕಾರು ಮಾಡಿಕೊಂಡು ಇಡೀ ಕುಟುಂಬ ಸಮೇತ ಇವತ್ತು ದೇವರ ದರ್ಶನ ಮಾಡೋಣ ಅಂತ ಹೊರಟಿದ್ರು. ಮೊದಲು ಕಬ್ಬಾಳಮ್ಮ ದೇವರ ದರ್ಶನ ಮುಗಿಸಿ ಸಂಜೆ ಸಂಜೆ 4:30ರ ಸುಮಾರಿಗೆ ಮುತ್ತತ್ತಿಗೆ ತೆರಳಿದ್ರು‌.

ಸಂಜೆ 4:45ರ ವೇಳೆಗೆ ಮುತ್ತತ್ತಿ ಆಂಜನೇಯ ದೇವರ ಪೂಜೆ ಮುಗಿಸಿ ಕಾವೇರಿ ನದಿಗೆ ಇಳಿದಿದ್ದಾರೆ. ಹೋಮ್ ಗಾರ್ಡ್‌ಗಳು ಸೂಚನೆ ಕೊಟ್ಟಿದ್ರೂ ನೀರು ಕಡಿಮೆ ಇದೆ ಅಂತ ಫೋಟೋ ತೆಗೆದುಕೊಳ್ಳೋಣ ಅಂತ ಭಾವಿಸಿ ನೀರಿಗೆ ಇಳಿದಿದ್ದಾರೆ. ಆದ್ರೆ ನೀರಿನ ರಭಸದ ಬಗ್ಗೆ ಅವರು ಯೋಚಿಸಿಯೇ ಇಲ್ಲ. ಈ ವೇಳೆ ವಿಜಯಮ್ಮ ನೀರಿನಲ್ಲಿ ಮುಳುಗಿದ್ದಾರೆ. ಅವರನ್ನ ರಕ್ಷಿಸಲು ಹೋಗಿ ಒಬ್ಬರಾದಮೇಲೆ ಒಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

28 ವರ್ಷದ ಶ್ವೇತಾ, 20 ವರ್ಷದ ಚೈತ್ರ, 28 ವರ್ಷದ ಪ್ರಿಯಾಂಕಾ, 50 ವರ್ಷದ ವಿಜಯಮ್ಮ ಮತ್ತು ಚಾಲಕ ಮಹೇಶ್ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಈ ವೇಳೆ ಸ್ಥಳೀಯರು ರವಿ ಹಾಗೂ 4 ವರ್ಷದ ಮಗುವನ್ನ ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿ ಐವರ ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ.

ದೇವರ ದರ್ಶನ ಪಡೆದು ಸುಮ್ಮನೆ ಬಂದಿದ್ರೆ ಪ್ರಾಣ ಉಳಿಯುತ್ತಿತ್ತೇನೋ. ಫೋಟೋ ಹುಚ್ಚಿಗೆ ಹೋಗಿ ಐದು ಜನರ ಪ್ರಾಣ ಪಕ್ಷಿಗಳು ಹಾರಿ ಹೋಗಿವೆ.

error: Content is protected !!