ಕೋಳಿ ಅಂಕಕ್ಕೆ ವಿಟ್ಲ ಪೊಲೀಸರ ದಾಳಿ- ಮೂರು ಕೋಳಿಯೊಂದಿಗೆ ಮೂವರ ಬಂಧನ!


ವಿಟ್ಲ: ಸಾಲೆತ್ತೂರು ಗ್ರಾಮದ ಸಾರ್ವಜನಿಕ ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ಹಣ ಪಣವಾಗಿಟ್ಟು ಕೋಳಿ ಅಂಕ ಜೂಜಾಟ ಆಡುತ್ತಿದ್ದ ಜಾಗಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.
ಉಳ್ಳಾಲ ಬೋಳಿಯಾರ್ ನಿವಾಸಿ 37 ವರ್ಷ ಪ್ರಾಯದ ಲತೇಶ್ ಕುಮಾರ್, ಬಂಟ್ವಾಳ ಮಂಚಿ ನಿವಾಸಿ 36 ವರ್ಷ ಪ್ರಾಯದ ಸುರೇಶ್ ನಾಯ್ಕ್ ಕೆ. ಹಾಗೂ ಬಂಟ್ವಾಳ ವಿಟ್ಲಪಡ್ನೂರು ನಿವಾಸಿ 40 ವರ್ಷ ಪ್ರಾಯದ ದಯಾನಂದ ಬಂಧಿತ ಆರೋಪಿಗಳಾಗಿದ್ದಾರೆ.
ಸಾಲೆತ್ತೂರು ಗ್ರಾಮದ ಸಾರ್ವಜನಿಕ ಗುಡ್ಡದ ಜಾಗದಲ್ಲಿ ಕಾನೂನು ಬಾಹಿರವಾಗಿ ಕೋಳಿ ಅಂಕ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ರಾಮಕೃಷ್ಣ ಅವರಿಗೆ ಸಿಕ್ಕಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ತಮ್ಮ ಠಾಣಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಿಢೀರ್ ದಾಳಿ ನಡೆಸಿದ್ದಾರೆ.
ವಶಪಡಿಸಿಕೊಂಡ ಸೊತ್ತುಗಳು:
ನಗದು: ಜೂಜಾಟಕ್ಕೆ ಬಳಸಿದ್ದ ₹1,550/- ಹಣ
ಕೋಳಿಗಳು: 03 ಅಂಕದ ಕೋಳಿಗಳು ಹಾಗೂ ಜೂಜಾಟಕ್ಕೆ ಬಳಸಿದ ಇತರೇ ಸೊತ್ತುಗಳು.
ಬಂಧಿತ ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 129/2026 ರಂತೆ, ಕರ್ನಾಟಕ ಪೊಲೀಸ್ ಕಾಯ್ದೆ (Karnataka Police Act, 1963) ಕಲಂ: 87, 93, ಪ್ರಾಣಿ ಹಿಂಸೆ ತಡೆ ಕಾಯ್ದೆ (Prevention of Cruelty to Animals Act, 1960) ಕಲಂ: 3, 11 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ: 112 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

error: Content is protected !!