
ಬಂಟ್ವಾಳ: “ನಿಜವಾದ ನಾಯಕತ್ವವು ಕೇವಲ ಅಧಿಕಾರ ಅಥವಾ ಹುದ್ದೆಗಳಿಗೆ ಸೀಮಿತವಾಗಿರಬಾರದು. ಸಾಮಾನ್ಯ ಜನರಿಗೆ ಅವರ ಹಕ್ಕುಗಳು ನಿರಾಕರಣೆಯಾದಾಗ, ನ್ಯಾಯ ಮತ್ತು ಸಮಾನತೆಗಾಗಿ ನಿರಂತರವಾಗಿ ಹೋರಾಡುವುದೇ ನಾಯಕರ ಮೊದಲ ಜವಾಬ್ದಾರಿಯಾಗಬೇಕು,” ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲ್ ತಿಳಿಸಿದ್ದಾರೆ.
ಬಿ.ಸಿ. ರೋಡ್ ಕೈಕಂಬದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಅಸೆಂಬ್ಲಿ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕ್ಷೇತ್ರಾಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್. ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಮಾಜದಲ್ಲಿ ತಲೆದೋರುತ್ತಿರುವ ಅನ್ಯಾಯ, ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯ ವಿರುದ್ಧ ಕಾರ್ಯಕರ್ತರು ಸದಾ ಜಾಗೃತರಾಗಿರಬೇಕು ಎಂದ ಶಾಕಿರ್, ಗ್ರಾಮ ಹಾಗೂ ವಾರ್ಡ್ ಮಟ್ಟದಲ್ಲಿ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಕರೆ ನೀಡಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ:
ಸಮಾವೇಶದ ಸಮಾರೋಪ ಭಾಷಣ ಮಾಡಿದ ಜಿಲ್ಲಾ ಕಾರ್ಯದರ್ಶಿ ನವಾಜ್ ಕಟ್ಟೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆಯನ್ನು ಬೂತ್ ಮಟ್ಟದಿಂದಲೇ ಬಲಪಡಿಸಬೇಕಾಗಿದೆ ಎಂದರು. ಹೊಸ ಸದಸ್ಯರ ಸೇರ್ಪಡೆ, ಜನಪರ ಹೋರಾಟಗಳ ತೀವ್ರತೆ ಹಾಗೂ ಸೇವಾ ಮನೋಭಾವದಿಂದ ಜನರ ವಿಶ್ವಾಸ ಗಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ:
ಇದೇ ಸಂದರ್ಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಗೆ ನೂತನ ಸದಸ್ಯರಾಗಿ ಶರೀಫ್ ವಳವೂರು, ಹೈದರ್ ಕಾವಳಕಟ್ಟೆ, ಹಂಝ ನಂದಾವರ ಮತ್ತು ಇಸ್ಮಾಯಿಲ್ ಬಾವ ಆಲಡ್ಕ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮೂನಿಷ್ ಅಲಿ, ಕಾರ್ಯದರ್ಶಿ ಅಶ್ರಫ್ ತಲಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕ್ಷೇತ್ರ ಸಮಿತಿ ಸದಸ್ಯ ಬಶೀರ್ ಬೊಳ್ಳಾಯಿ ಸ್ವಾಗತಿಸಿದರೆ, ಕ್ಷೇತ್ರ ಕಾರ್ಯದರ್ಶಿ ಕಬೀರ್ ಅಕ್ಕರಂಗಡಿ ವಂದಿಸಿದರು. ವಿವಿಧ ಬ್ಲಾಕ್ ಮತ್ತು ಬೂತ್ ಮಟ್ಟದ ಪದಾಧಿಕಾರಿಗಳು ಮುಂಬರುವ ಚುನಾವಣಾ ಸಿದ್ಧತೆಗಳ ಕುರಿತು ಮಹತ್ವದ ಚರ್ಚೆ ನಡೆಸಿದರು.
