
ವಾಷಿಂಗ್ಟನ್: ವಿವಾಹವಾದ ಕೆಲವೇ ಗಂಟೆಗಳಲ್ಲಿ ಅಮೆರಿಕದಲ್ಲಿ ಹೆಲಿಕಾಪ್ಟರ್ ಪತನವಾಗಿ ವರ ಮೃತಪಟ್ಟಿದ್ದು, ವಧು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ವರ ಅಟ್ಲಾಂಟಾ ನಿವಾಸಿಡೇವ್ ಫಿಜಿ (25) ಮೃತ ವ್ಯಕ್ತಿ. ಈತ ಡೆಲ್ಟಾ ಏರ್ ಲೈನ್ಸ್ ಪೈಲಟ್ ಆಗಿದ್ದು, ಡಾಸನ್ ಕೌಂಟಿಯ ಡಾಸನ್ವಿಲ್ಲೆ ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಪತ್ನಿ ಜೆಸ್ನಿ ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಹೆಲಿಕಾಪ್ಟರ್ ಪೈಲಟ್ ಕೂಡ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಡಾಸನ್ವಿಲ್ಲೆ ಬಳಿಯ ದಿ ರೆವೆರೆಯಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನೂರಾರು ಅತಿಥಿಗಳು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿವಾಹದ ಬಳಿಕ ದಂಪತಿ ಹೋಟೆಲ್‌ಗೆ ತೆರಳಲು ಹೆಲಿಕಾಪ್ಟರ್ ಏರಿದ್ದರು. ಆದರೆ, ಮಳೆ ಮತ್ತು ದಟ್ಟವಾದ ಮಂಜಿನ ಕಾರಣದಿಂದಾಗಿ ಹೆಲಿಕಾಪ್ಟರ್ ಡಾಸನ್ವಿಲ್ಲೆಯ ದಟ್ಟ ಅರಣ್ಯ ಹಾಗೂ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ ಎಂದು ವರದಿಯಾಗಿದೆ.

ಡೇವ್ ಅವರ ಪೋಷಕರಾದ ಜಾರ್ಜ್ ಮತ್ತು ಫೆಬಾ ಫಿಜಿ, ಕೇರಳದ ಎರ್ನಾಕುಲಂನ ಮುವಾಟ್ಟುಪುಝದಿಂದ ಹಲವು ವರ್ಷಗಳ ಹಿಂದೆ ಅಮೆರಿಕಕ್ಕೆ ವಲಸೆ ಹೋಗಿದ್ದರು. ಜೆಸ್ನಿ ಕೇರಳದ ಅಲಪ್ಪುಝ ಮೂಲದವರಾಗಿದ್ದಾರೆ