ಇತಿಹಾಸದ ಪುಟಗಳಿಂದ ಕಣ್ಣಮುಂದೆ ಬರಲಿದ್ದಾಳೆ ವೀರರಾಣಿ ಅಬ್ಬಕ್ಕ! ಮಳಲಿಯಲ್ಲಿ ಶುರುವಾಯ್ತು ಭರ್ಜರಿ ʻಚಿತ್ರಕೂಟ’!

ಮಂಗಳೂರು: ವೀರರ ಮಣ್ಣು ತುಳುನಾಡಿನ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ರಾಣಿ ಅಬ್ಬಕ್ಕಳ ಶೌರ್ಯದ ಪರಂಪರೆಯನ್ನು ಮುಂದಿನ ಪೀಳಿಗೆಗೆ ದೃಶ್ಯ ರೂಪದಲ್ಲಿ ಕೊಂಡೊಯ್ಯುವ ಮಹತ್ವಾಕಾಂಕ್ಷಿ ‘ಮಣೆಲ್ ಗ್ರಾಮೊಡೊಂಜಿ ಚಿತ್ರಕೂಟ’ ಎರಡು ದಿನಗಳ ಕಲಾ ಶಿಬಿರಕ್ಕೆ ಮಳಲಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ಚಾಲನೆ ನೀಡಲಾಯಿತು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಇಂಟಾಕ್ ಮಂಗಳೂರು ವಿಭಾಗ ಹಾಗೂ ರಾಣಿ ಅಬ್ಬಕ್ಕ ಚಾವಡಿ ಮಣೆಲ್ (ಮಳಲಿ) ಇವುಗಳ ಜಂಟಿ ಆಶ್ರಯದಲ್ಲಿ ಗಂಜಿಮಠ ವ್ಯಾಪ್ತಿಯ ಮಣೆಲ್(ಮಳಲಿ)ನಲ್ಲಿ ಆಯೋಜಿಸಲಾಗಿದ್ದ ಈ ಅಪರೂಪದ ಚಿತ್ರಕಲಾ ಶಿಬಿರವನ್ನು ಪ್ರಸಿದ್ಧ ಹಿರಿಯ ಚಿತ್ರಕಲಾವಿದ ಗಣೇಶ್ ಸೋಮಯಾಜಿ ಅವರು ತಾವೇ ಸ್ವತಃ ಕಲಾಕೃತಿಯೊಂದನ್ನು ರಚಿಸುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಿದರು.

ಪುಸ್ತಕ ರೂಪದಲ್ಲಿ ದಾಖಲಾಗಲಿವೆ 20 ಕಲಾಕೃತಿಗಳು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗಣೇಶ್ ಸೋಮಯಾಜಿ ಅವರು, “ಈ ವಿಶಿಷ್ಟ ಚಿತ್ರಕೂಟದ ಮೂಲಕ ಮೂಡಿಬರಲಿರುವ ಸುಮಾರು 20 ಅತ್ಯಮೂಲ್ಯ ದೃಶ್ಯ ಕಲಾಕೃತಿಗಳನ್ನು ಮುಂದೆ ಸುಂದರ ಪುಸ್ತಕ ರೂಪದಲ್ಲಿ ದಾಖಲೀಕರಣ ಮಾಡಲಾಗುವುದು. ಇಂತಹ ಕಲಾತ್ಮಕ ಕಾರ್ಯಕ್ರಮಗಳ ಮೂಲಕ ಒಂದು ಅಪರೂಪದ ಊರಿನ ಪಾರಂಪರಿಕ ಶ್ರೀಮಂತಿಕೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಕೆಲಸ ಶ್ಲಾಘನೀಯ,” ಎಂದರು.

ಮಣೆಲ್ ಚರಿತ್ರೆಯನ್ನು ದೃಶ್ಯ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, “ರಾಣಿ ಅಬ್ಬಕ್ಕಳು ಮಳಲಿಯಲ್ಲಿದ್ದುಕೊಂಡು ರಾಜ್ಯಭಾರ ಮಾಡಿದ ಅಪರೂಪದ ಚರಿತ್ರೆಯಿದೆ. ಈ ಊರಿನ ಚಾರಿತ್ರಿಕ ಹಿನ್ನೆಲೆಯನ್ನು ಇಂದಿನ ಪೀಳಿಗೆಗೆ ದಾಟಿಸಬೇಕಿದೆ. ಮಣೆಲ್‌ನ ಇತಿಹಾಸ ಈಗಾಗಲೇ ಅಕ್ಷರ ರೂಪದಲ್ಲಿ ಲಭ್ಯವಿದ್ದರೂ, ಅದನ್ನು ದೃಶ್ಯ (ಚಿತ್ರ) ರೂಪದಲ್ಲಿ ಪ್ರಸ್ತುತಪಡಿಸುವ ವಿಶಿಷ್ಟ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ,” ಎಂದು ಯೋಜನೆಯ ಆಶಯವನ್ನು ಹಂಚಿಕೊಂಡರು.

ತುಳುನಾಡು ಕಲಿಯುವ ಆಸೆ ವ್ಯಕ್ತಪಡಿಸಿದ ಹೆಚ್ಚುವರಿ ಎಎಸ್ಪಿ
ಕಾರ್ಯಕ್ರಮಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ ಮಾತನಾಡಿ, “ತುಳುನಾಡಿನ ಶ್ರೀಮಂತ ಸಂಸ್ಕೃತಿಯನ್ನು ತಿಳಿಯುವ ಮತ್ತು ಇಲ್ಲಿನ ತುಳು ಭಾಷೆಯನ್ನು ಕಲಿಯುವ ತೀವ್ರ ಆಸಕ್ತಿ ನನಗಿದೆ. ಈ ಕಲಾತ್ಮಕ ಕಾರ್ಯಕ್ರಮದ ಮೂಲಕ ಮಣೆಲ್ ಗ್ರಾಮದ ಗತವೈಭವ ಎಲ್ಲೆಡೆ ಪಸರಿಸುವಂತಾಗಲಿ,” ಎಂದು ಶುಭ ಹಾರೈಸಿದರು.

ಇತಿಹಾಸದ ಆಕರಗಳತ್ತ ಬೆಳಕು ಚೆಲ್ಲಿದ ಉಪನ್ಯಾಸ
ವಿಶೇಷ ಉಪನ್ಯಾಸ ನೀಡಿದ ಪ್ರಸಿದ್ಧ ಇತಿಹಾಸ ತಜ್ಞ ಡಾ. ಪುಂಡಿಕಾ ಗಣಪಯ್ಯ ಭಟ್ ಅವರು, “ಚೌಟ ಅರಸರ ಕಾಲದಲ್ಲಿ ಐದು ಮಂದಿ ಅಬ್ಬಕ್ಕ ದೇವಿಯರ ಉಲ್ಲೇಖಗಳಿವೆ. ಇದರಲ್ಲಿ ಉಳ್ಳಾಲದಲ್ಲಿದ್ದ ಹಿರಿಯ ಅಬ್ಬಕ್ಕ (1554-1584) ಹಾಗೂ ಆಕೆಯ ಪುತ್ರಿಯಾದ ಮಣೆಲ್‌ನ 2ನೇ ಅಬ್ಬಕ್ಕ ದೇವಿ (1595-1640) ಇತಿಹಾಸಕ್ಕೆ ಅತ್ಯಂತ ಪ್ರಸ್ತುತ. 1628ರಲ್ಲಿ ಮಂಗಳೂರಿನ ಮಣೆಲ್‌ಗೆ ಭೇಟಿ ನೀಡಿದ್ದ ಇಟಲಿಯ ಪ್ರವಾಸಿ ಪಿಯಾತ್ರೋ ಡೆಲ್ಲವೆಲ್ಲೆ ಅವರು ತಮ್ಮ ಪ್ರವಾಸ ಕಥನದಲ್ಲಿ ಮಣೆಲ್ ಅಬ್ಬಕ್ಕಳ ಬಗ್ಗೆ ಎಳೆಎಳೆಯಾಗಿ ಬರೆದಿದ್ದಾರೆ. ಇತಿಹಾಸವನ್ನು ಕೇವಲ ವೈಭವೀಕರಿಸುವ ಬದಲು ಮೂಲ ಆಕರಗಳ ಮೂಲಕ ವಸ್ತುನಿಷ್ಠ ಅಧ್ಯಯನ ನಡೆಸಬೇಕಾಗಿದೆ,” ಎಂದು ಕರೆ ನೀಡಿದರು.

ಶಿಬಿರದಲ್ಲಿ ಪ್ರಸಿದ್ಧ ಕಲಾವಿದರಾದ ವಿಲ್ಸನ್ ಸೋಜಾ, ಸಂತೋಷ್ ಅಂದ್ರಾದೆ, ಜೀವನ್ ಸಾಲ್ಯಾನ್ ಸೇರಿದಂತೆ ರಾಜ್ಯದ ಹಲವು ಪ್ರಮುಖ ಹನ್ನೆರಡು ಚಿತ್ರಕಲಾವಿದರು ಪಾಲ್ಗೊಂಡು ಮಳಲಿ ಅರಮನೆ, ದೇವಸ್ಥಾನ, ಮಣ್ಣಿನ ಸಂಸ್ಕೃತಿ ಬಿಂಬಿಸುವ ಸೃಜನಾತ್ಮಕ ಚಿತ್ರಗಳನ್ನು ರಚಿಸುತ್ತಿದ್ದಾರೆ. ನಿವೃತ್ತ ಪ್ರೊಫೆಸರ್ ಅಕ್ಷಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರೆ, ಅಕಾಡೆಮಿ ಸದಸ್ಯ ಬೂಬ ಪೂಜಾರಿ ಮಳಲಿ ಸ್ವಾಗತಿಸಿದರು. ವೇದಿಕೆಯಲ್ಲಿ ಪ್ರಮುಖರಾದ ವಾಮನ್ ನಾಯ್ಕ್, ಅಬ್ದುಲ್ ರಜಾಕ್, ಪ್ರಶಾಂತ್ ಕಟ್ಟೆಮಾರ್ ಹಾಗೂ ಸುಭಾಶ್ಚಂದ್ರ ಬಸು ಉಪಸ್ಥಿತರಿದ್ದರು.

error: Content is protected !!