ಡಿಕೆಶಿ ಸಂಪುಟಕ್ಕೆ ‘ಕ್ಲೀನ್ ಇಮೇಜ್’ ಬಲ: ಹೈಕಮಾಂಡ್ ಮೆಚ್ಚಿನ ನಾಯಕ ಮಂಜುನಾಥ್ ಭಂಡಾರಿಗೆ ಸಚಿವ ಸ್ಥಾನ ಬಹುತೇಕ ಖಚಿತ!

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ ನಲ್ಲಿ ಸಚಿವ ಸಂಪುಟ ಕಸರತ್ತು ತೀವ್ರಗೊಂಡಿರುವ ಬೆನ್ನಲ್ಲೇ, ನೂತನ ಮುಖ್ಯಮಂತ್ರಿ ನಿಯೋಜಿತ ಡಿ.ಕೆ. ಶಿವಕುಮಾರ್ ಅವರ ಸಂಪುಟ ಸೇರಲಿರುವ ಪ್ರಮುಖ ನಾಯಕರ ಹೆಸರುಗಳು ಮುಂಚೂಣಿಗೆ ಬರುತ್ತಿವೆ. ಈ ರೇಸ್‌ನಲ್ಲಿ ಯಾವುದೇ ವಿವಾದಗಳಿಲ್ಲದ, ಸದಾ ಅಭಿವೃದ್ಧಿ ಪರ ಚಿಂತನೆ ನಡೆಸುವ ಹಾಗೂ ಹೈಕಮಾಂಡ್‌ನ ಅತ್ಯಂತ ನಂಬಿಕಸ್ಥ ನಾಯಕರಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಖರ್ಗೆ-ರಾಹುಲ್ ಆಪ್ತ ವಲಯದ ʻಪರಮಾಪ್ತ’!
ಮಂಜುನಾಥ್ ಭಂಡಾರಿ ಅವರು ಸುದೀರ್ಘ ಅವಧಿಯ ವಿಧಾನ ಪರಿಷತ್ ಸದಸ್ಯರಾಗಿ (MLC) ರಾಜಕೀಯದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವುದು ಇವರ ರಾಜಕೀಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಸಾಧು ಸಜ್ಜನ ರಾಜಕಾರಣಿಯಾಗಿ, ಎಂದೂ ಮಂತ್ರಿಗಿರಿಗಾಗಿ ಹೈಕಮಾಂಡ್ ಮುಂದೆ ಬಹಿರಂಗವಾಗಿ ಲಾಬಿ ನಡೆಸದ ಇವರ ನಿಸ್ವಾರ್ಥ ನಡೆ ದೆಹಲಿ ನಾಯಕರ ಮೆಚ್ಚುಗೆಗೆ ಪ್ರಮುಖ ಕಾರಣವಾಗಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ದಾವಣಗೆರೆ ಉಪಚುನಾವಣೆಯ ಮಾಸ್ಟರ್ ಮೈಂಡ್!
ಮಂಜುನಾಥ್ ಭಂಡಾರಿ ಅವರ ಸಂಘಟನಾ ಚಾತುರ್ಯಕ್ಕೆ ಇತ್ತೀಚಿನ ದಾವಣಗೆರೆ ಉಪಚುನಾವಣೆಯ ಯಶಸ್ಸೇ ಸಾಕ್ಷಿ. ಭಂಡಾರಿ ಅವರ ಸಮರ್ಥ ಚುನಾವಣಾ ಉಸ್ತುವಾರಿಯಲ್ಲಿ ಕಾಂಗ್ರೆಸ್ ತಂತ್ರಗಾರಿಕೆ ಅತ್ಯಂತ ಯಶಸ್ವಿಯಾಗಿ ರೂಪಿತವಾಗಿತ್ತು. ಇವರ ನೇತೃತ್ವದಲ್ಲಿ ನಡೆದ ಭರ್ಜರಿ ಪ್ರಚಾರ ಮತ್ತು ಬೂತ್ ಮಟ್ಟದ ಸಂಘಟನೆಯ ಫಲವಾಗಿ ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭವ್ಯ ಗೆಲುವು ಸಾಧಿಸುವಂತಾಯಿತು. ಈ ಗೆಲುವು ಹೈಕಮಾಂಡ್ ಮಟ್ಟದಲ್ಲಿ ಭಂಡಾರಿ ಅವರ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.

ವಿವಾದ ಮುಕ್ತ ಹಾಗೂ ಅಭಿವೃದ್ಧಿ ಪರ ಚಿಂತಕ
ರಾಜಕಾರಣದಲ್ಲಿ ಸದಾ ಸಕ್ರಿಯರಾಗಿದ್ದರೂ ಯಾವುದೇ ವಿವಾದಾತ್ಮಕ ಹೇಳಿಕೆ ನೀಡದ, ಯಾವುದೇ ಹಗರಣ ಅಥವಾ ವಿವಾದಗಳಿಗೆ ಸಿಲುಕದ ‘ಕ್ಲೀನ್ ಇಮೇಜ್’ ಹೊಂದಿರುವುದು ಇವರ ಮತ್ತೊಂದು ಪ್ಲಸ್ ಪಾಯಿಂಟ್. ಸದಾ ಕಾಲ ಸಮಾಜದ ಮತ್ತು ಕ್ಷೇತ್ರಗಳ ಅಭಿವೃದ್ಧಿಗಾಗಿ ತುಡಿಯುವ ಇವರ ಸಜ್ಜನಿಕೆಯ ರಾಜಕಾರಣಕ್ಕೆ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಸೂಕ್ತ ಮನ್ನಣೆ ಸಿಗುವುದು ಖಚಿತ ಎನ್ನಲಾಗುತ್ತಿದ್ದು, ಕರಾವಳಿ ಹಾಗೂ ಪಕ್ಷದ ಸಂಘಟನಾ ಕೋಟಾದಡಿ ಇವರಿಗೆ ಸಚಿವ ಪಟ್ಟ ಒಲಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

error: Content is protected !!