ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಹದಿನೈದು ವರ್ಷಗಳ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಆಡಳಿತಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ರೇಕ್ ಬಿದ್ದಿದೆ. ಮುಖ್ಯಮಂತ್ರಿಯಾಗಿ ಪಟ್ಟಕ್ಕೇರಿರುವ ಬಿಜೆಪಿಯ ಸುವೇಂದು ಅಧಿಕಾರಿ ಅವರು ಸಾರ್ವಜನಿಕರನ್ನು ಸೆಳೆಯುವ ನಿಟ್ಟಿನಲ್ಲಿ ಭರ್ಜರಿ ಜನಪ್ರಿಯ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಮಂಗಳವಾರ ನಡೆದ ಬೃಹತ್ ಜನಸಮಾವೇಶದಲ್ಲಿ ಮಾತನಾಡಿದ ಅವರು, ಅತ್ಯಂತ ಅಗ್ಗದ ದರದಲ್ಲಿ ಆಹಾರ, ಮಹಿಳೆಯರಿಗೆ ಮಾಸಿಕ ನಗದು ಭತ್ಯೆ ಹಾಗೂ ಮದ್ಯದ ಅಂಗಡಿಗಳ ಮೇಲೆ ಕಠಿಣ ನಿಷೇಧ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಘೋಷಿಸುವ ಮೂಲಕ ಹೊಸ ದರ್ಬಾರ್ ಆರಂಭಿಸಿದ್ದಾರೆ.
![]()
5 ರೂಪಾಯಿಗೆ ಮೀನು-ಊಟ
ಬಂಗಾಳಿಗಳ ಅತ್ಯಂತ ಪ್ರೀತಿಯ ಆಹಾರವಾದ ʻಮೀನು ಮತ್ತು ಅನ್ನ’ವನ್ನು (Fish-Rice Meal) ಇನ್ಮುಂದೆ ರಾಜ್ಯಾದ್ಯಂತ ಕೇವಲ 5 ರೂಪಾಯಿ ಸಬ್ಸಿಡಿ ದರದಲ್ಲಿ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಇದಕ್ಕಾಗಿ ರಾಜ್ಯದಾದ್ಯಂತ ಸುಮಾರು 400 ಪ್ರತ್ಯೇಕ ಕ್ಯಾಂಟೀನ್‌ಗಳನ್ನು ತೆರೆಯಲಾಗುತ್ತಿದ್ದು, ಇದು ಮಮತಾ ಬ್ಯಾನರ್ಜಿ ಅವರ ‘ಮಾ ಕ್ಯಾಂಟೀನ್’ ಯೋಜನೆಗೆ ನೇರ ಕೌಂಟರ್ ಎನ್ನಲಾಗಿದೆ. ಇದರೊಂದಿಗೆ, ಮಹಿಳಾ ಮತದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಅನ್ನಪೂರ್ಣ ಯೋಜನೆ’ಯನ್ನು ಘೋಷಿಸಲಾಗಿದ್ದು, ಇದರ ಅಡಿಯಲ್ಲಿ ಅರ್ಹ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 3,000 ರೂಪಾಯಿಗಳ ಆರ್ಥಿಕ ಸಹಾಯಧನವನ್ನು ನೇರವಾಗಿ ಜಮೆ ಮಾಡಲಾಗುತ್ತದೆ. ಈ ಯೋಜನೆಯ ಅರ್ಜಿ ನಮೂನೆಗಳನ್ನು ಮೇ 27ರಿಂದಲೇ ವಿತರಿಸಲು ಆದೇಶಿಸಲಾಗಿದೆ.

ಮದ್ಯದ ಅಂಗಡಿಗಳಿಗೆ ಕಠಿಣ ನಿಯಮ ಹಾಗೂ ನುಸುಳುಕೋರರ ಪತ್ತೆ:
ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಮತ್ತೊಂದು ಕಠಿಣ ಕಾನೂನನ್ನು ತಂದಿದ್ದು, ಯಾವುದೇ ಶಾಲೆ, ಕಾಲೇಜು ಮತ್ತು ಪ್ರಮುಖ ದೇವಸ್ಥಾನಗಳ ಸುತ್ತಮುತ್ತ 1 ಕಿಲೋಮೀಟರ್ ವ್ಯಾಪ್ತಿಯೊಳಗೆ ಮದ್ಯದ ಅಂಗಡಿಗಳನ್ನು ತೆರೆಯಲು ಇನ್ಮುಂದೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಗಡಿ ಭಾಗದ ಜಿಲ್ಲಾಡಳಿತಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ‘ಅಕ್ರಮ ನುಸುಳುಕೋರರನ್ನು’ ಪತ್ತೆ ಹಚ್ಚಿ ಬಂಧಿಸಲು ‘ಹೋಲ್ಡಿಂಗ್ ಸೆಂಟರ್’ಗಳನ್ನು ಸ್ಥಾಪಿಸುವಂತೆ ಆದೇಶಿಸಿರುವುದು ಭಾರಿ ಸಂಚಲನ ಮೂಡಿಸಿದೆ.

“ಇದು ರಾಜನ ಆಡಳಿತವಲ್ಲ, ಕಾನೂನಿನ ಆಡಳಿತ”:
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, “ಬಂಗಾಳದಲ್ಲಿ ಈಗ ಹೊಸದೊಂದು ವ್ಯವಸ್ಥೆ ಜಾರಿಗೆ ಬಂದಿದೆ. ಇಲ್ಲಿ ಇನ್ಮುಂದೆ ಯಾವುದೇ ರಾಜನ ಅಥವಾ ಸರ್ವಾಧಿಕಾರಿಯ ಆಡಳಿತ ನಡೆಯುವುದಿಲ್ಲ, ಬದಲಿಗೆ ಕೇವಲ ಸಂವಿಧಾನ ಮತ್ತು ಕಾನೂನಿನ ಆಡಳಿತ (Rule of Law) ನಡೆಯಲಿದೆ” ಎಂದು ಮಮತಾ ಬ್ಯಾನರ್ಜಿಯವರಿಗೆ ತೀಕ್ಷ್ಣ ಟಾಂಗ್ ನೀಡಿದ್ದಾರೆ. ‘ದೇಶ ಮೊದಲು’ ಎಂಬ ತತ್ವದೊಂದಿಗೆ ಹೊಸ ಶಾಸಕರು, ಹೊಸ ಮಂತ್ರಿಗಳನ್ನೊಳಗೊಂಡ ಬಿಜೆಪಿ ಸರ್ಕಾರವು ತನ್ನ ಪ್ರಣಾಳಿಕೆಯನ್ನು ಆಡಳಿತದ ಪ್ರತಿಯೊಂದು ಹಂತಕ್ಕೂ ತಲುಪಿಸುವುದಾಗಿ ಅವರು ಗುಡುಗಿದ್ದಾರೆ.
