ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನ; ಪ್ರಾಣಾಪಾಯದಿಂದ ಪಾರಾದ ಹಿರಿಯ ಅಧಿಕಾರಿಗಳು

ಲೇಹ್: ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನಗೊಂಡ ಘಟನೆ ಲಡಾಖ್‌ನ ಲೇಹ್ ಸಮೀಪದ ಟ್ಯಾಂಗ್ಸ್ಟೆ ಪರ್ವತ ಪ್ರದೇಶದಲ್ಲಿ ಸಂಭವಿಸಿದ್ದು, ಅದರಲ್ಲಿದ್ದ ಮೂವರು ಹಿರಿಯ ಸೇನಾ ಅಧಿಕಾರಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೇ 20ರಂದು ನಡೆದ ಈ ಘಟನೆ ಕುರಿತು ಸೇನಾ ಅಧಿಕಾರಿಗಳು ಶುಕ್ರವಾರ ಅಧಿಕೃತ ಮಾಹಿತಿ ನೀಡಿದ್ದಾರೆ. ಸೇನೆಯ ‘ಚೀತಾ’ ಸಿಂಗಲ್ ಎಂಜಿನ್ ಹೆಲಿಕಾಪ್ಟರ್‌ನಲ್ಲಿ ಒಬ್ಬ ಲೆಫ್ಟಿನೆಂಟ್ ಕರ್ನಲ್ ಹಾಗೂ ಇಬ್ಬರು ಮೇಜರ್ ಹುದ್ದೆಯ ಅಧಿಕಾರಿಗಳು ಪ್ರಯಾಣಿಸುತ್ತಿದ್ದರು. ಹೆಲಿಕಾಪ್ಟರ್ ಅನ್ನು ಲೆಫ್ಟಿನೆಂಟ್ ಕರ್ನಲ್ ಮತ್ತು ಒಬ್ಬ ಮೇಜರ್ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇವರೊಂದಿಗೆ 3ನೇ ಪದಾತಿದಳ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ ಆಗಿರುವ ಸಚಿನ್ ಮೆಹ್ತಾ ಅವರು ಸಹ ಪ್ರಯಾಣಿಸುತ್ತಿದ್ದರು. ಹೆಲಿಕಾಪ್ಟರ್ ಪತನಗೊಂಡ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಅದೃಷ್ಟವಶಾತ್ ಮೂವರು ಅಧಿಕಾರಿಗಳಿಗೂ ಕೇವಲ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಸೇನೆ ತಿಳಿಸಿದೆ.

ಅಪಘಾತದ ಬಳಿಕ ಮೇಜರ್ ಜನರಲ್ ಸಚಿನ್ ಮೆಹ್ತಾ ಅವರು ಕ್ಲಿಕ್ಕಿಸಿಕೊಂಡ ಸೆಲ್ಫಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತಾಂತ್ರಿಕ ದೋಷವೋ ಅಥವಾ ಹವಾಮಾನ ವೈಪರೀತ್ಯವೋ ಎಂಬ ಕುರಿತು ಸೇನೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

error: Content is protected !!