
ಬೆಂಗಳೂರು: ದೇಶಾದ್ಯಂತ ಗ್ರಾಹಕರಿಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರ ಏರಿಕೆಯ ಶಾಕ್ ನೀಡಿದ್ದು, ಕಳೆದ ಶುಕ್ರವಾರ(ಮೇ 15)ವಷ್ಟೇ ಇಂಧನ ದರ 3 ರೂ.ನಷ್ಟು ಏರಿಕೆಯಾಗಿತ್ತು. ಆದರೆ ಇಂದು ಬೆಳ್ಳಂಬೆಳಗ್ಗೆ ಮತ್ತೊಮ್ಮೆ ಪೆಟ್ರೋಲ್, ಡೀಸೆಲ್ ದರ ಪ್ರತಿ ಲೀಟರ್ಗೆ ಸರಾಸರಿ 90 ಪೈಸೆ ಏರಿಕೆಯಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಒಂದೇ ವಾರದಲ್ಲಿ ಎರಡನೇ ಬಾರಿ ತೈಲ ಬೆಲೆ ಏರಿಕೆಯಾಗಿರುವುದನ್ನು ಕಂಡು ವಾಹನ ಸವಾರರು ಆಕ್ರೋಶ ಹೊರಹಾಕುತ್ತಿದ್ದಾರೆ.

4 ದಿನಗಳ ಹಿಂದೆ 106.17 ರೂ.ಇದ್ದ ಪೆಟ್ರೋಲ್ ಬೆಲೆ 107.16 ರೂ. ಹಾಗೂ 94.10 ರೂ. ಇದ್ದ ಡೀಸೆಲ್ 95.03 ರೂ. ಗೆ ತಲುಪಿದೆ. ಜಾಗತಿಕ ಪರಿಸ್ಥಿತಿ ಅರ್ಥವಾದರೂ, ಸರ್ಕಾರ ಸಾಮಾನ್ಯ ಜನರ ಹಿತದೃಷ್ಟಿಯಿಂದ ಇಂಧನ ದರ ನಿಯಂತ್ರಣಕ್ಕೆ ಗಮನ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 97.77 ರೂ.ನಿಂದ 98.64 ರೂ.ಗೆ ಏರಿಕೆಯಾಗಿದೆ. ಹಾಗೆಯೇ ಡೀಸೆಲ್ ದರ 90.67ರೂ.ನಿಂದ 91.58 ರೂ.ಗೆ ತಲುಪಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ 91 ಪೈಸೆ ಹೆಚ್ಚಳವಾಗುವುದರೊಂದಿಗೆ 107.59ರೂ.ಗೆ ತಲುಪಿದ್ದರೆ, ಡೀಸೆಲ್ ದರ 94 ಪೈಸೆ ಏರಿಕೆಯಾಗಿ 94.08 ರೂ. ತಲುಪಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರದಲ್ಲಿ ಗರಿಷ್ಠ 96 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಬೆಲೆ 109.70 ರೂ. ಮುಟ್ಟಿದೆ. ಇನ್ನು ಡೀಸೆಲ್ ದರ 94 ಪೈಸೆ ಹೆಚ್ಚಳದೊಂದಿಗೆ 96.07 ರೂ.ಗೆ ಜಿಗಿದಿದೆ. ತಮಿಳುನಾಡಿನ ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 82 ಪೈಸೆ ಹೆಚ್ಚಳವಾಗಿ 104.49 ರೂ. ಹಾಗೂ ಡೀಸೆಲ್ ಬೆಲೆ 86 ಪೈಸೆ ಏರಿಕೆಯಾಗಿ 96.11 ರೂ.ಗೆ ತಲುಪಿದೆ.

ತೈಲ ಬೆಲೆ ಹೆಚ್ಚುತ್ತಿದ್ದಂತೆ ಬಸ್‌ಗಳು, ಟ್ಯಾಕ್ಸಿಗಳು ಮತ್ತು ಸರಕು ಸಾಗಣೆ ವೆಚ್ಚಗಳು ಹೆಚ್ಚಾಗುತ್ತಿದೆ.