ಮಂಗಳೂರು: ನಗರದ ಹೃದಯಭಾಗದಲ್ಲಿರುವ ಶರವು ಮಹಾಗಣಪತಿ ದೇವಸ್ಥಾನದ ರಸ್ತೆ ಬದಿಯ ‘ರಾಯಲ್ ಗಝಿಬೋ’ ರೆಸ್ಟೋರೆಂಟ್ ಮಾಲೀಕನ ಸಾರ್ವಜನಿಕ ಜಾಗ ಅತಿಕ್ರಮಣದ ದಂಧೆ ಮಿತಿಮೀರಿದ್ದು, ಮನಪಾ ಹಾಗೂ ಪೊಲೀಸ್ ಇಲಾಖೆಯನ್ನೇ ಅಣಕಿಸುವಂತೆ ಮತ್ತೆ ಬ್ಯಾರಿಕೇಡ್‌ಗಳನ್ನು ಪ್ರತ್ಯಕ್ಷಗೊಳಿಸಿದ್ದಾನೆ. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಈ ಹಳೆ ಚಾಳಿಯನ್ನು ಮಾಲೀಕ ಮತ್ತೆ ಮುಂದುವರಿಸಿರುವುದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ.





ಪೊಲೀಸರ ಎಚ್ಚರಿಕೆಗೂ ಕವಡೆ ಕಾಸಿನ ಬೆಲೆಯಿಲ್ಲ!
ಈ ಹಿಂದೆ ಇದೇ ರೆಸ್ಟೋರೆಂಟ್ ಮುಂಭಾಗ ಅಕ್ರಮವಾಗಿ ಬ್ಯಾರಿಕೇಡ್ ಅಳವಡಿಸಿ ಸಾರ್ವಜನಿಕರ ಪಾರ್ಕಿಂಗ್ ಜಾಗವನ್ನು ಬಂದ್ ಮಾಡಲಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಪೊಲೀಸ್ ಇಲಾಖೆಯ ಬಿಸಿ ಮುಟ್ಟುತ್ತಿದ್ದಂತೆ ಬ್ಯಾರಿಕೇಡ್ ತೆರವುಗೊಳಿಸಿ, ಆ ಬಳಿಕ ಮತ್ತೆ ಅಳವಡಿಸುವ ನಾಟಕವಾಡಿದ್ದ ಮಾಲೀಕ, ಕೊನೆಗೆ ಜನಸಾಮಾನ್ಯರ ಟೀಕೆಯ ಸುರಿಮಳೆಗೆ ಹೆದರಿ ಸಂಪೂರ್ಣವಾಗಿ ಜಾಗ ಮುಕ್ತಗೊಳಿಸಿದ್ದನು. ಆದರೆ ಈ ಘಟನೆ ನಡೆದು ಕೇವಲ ವಾರಗಳು ಕಳೆಯುವಷ್ಟರಲ್ಲೇ ಪೊಲೀಸರ ಸೂಚನೆಯನ್ನು ಗಾಳಿಗೆ ತೂರಿ ಉದ್ಧಟತನ ಪ್ರದರ್ಶಿಸಿದ್ದಾನೆ.

ಸಾರ್ವಜನಿಕರ ಜಾಗ ‘ಗುಳುಂ’ ಮಾಡಲು ಮತ್ತೆ ಅತಿರೇಕದ ಯತ್ನ
“ಜನರು ಎಲ್ಲವನ್ನೂ ಮರೆತಿದ್ದಾರೆ” ಎಂಬ ಅತಿವಿಶ್ವಾಸ ಹಾಗೂ ದುರಹಂಕಾರದಿಂದ ರೆಸ್ಟೋರೆಂಟ್ ಮಾಲೀಕ ಈಗ ಮತ್ತೆ ಸಾರ್ವಜನಿಕ ಪಾರ್ಕಿಂಗ್ ಜಾಗಕ್ಕೆ ಬ್ಯಾರಿಕೇಡ್‌ಗಳನ್ನು ನುಗ್ಗಿಸಿದ್ದಾನೆ. ರಸ್ತೆ ಬದಿಯ ಸರ್ಕಾರಿ ಜಾಗವನ್ನು ತನ್ನ ಸ್ವಂತ ಪಿತ್ರಾರ್ಜಿತ ಆಸ್ತಿಯಂತೆ ಬಳಸಿಕೊಳ್ಳುತ್ತಿರುವ ಈತನ ವರ್ತನೆಗೆ ವಾಹನ ಸವಾರರು ಗರಂ ಆಗಿದ್ದಾರೆ. ಕಾನೂನು ಪಾಲಿಸಬೇಕಾದ ಉದ್ಯಮಿಯೊಬ್ಬ, ವ್ಯವಸ್ಥೆಯೊಂದಿಗೆ ಕಣ್ಣುಮುಚ್ಚಾಳೆ ಆಡುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿದೆ.

ಸಾರ್ವಜನಿಕರು ಗರಂ: ಕಠಿಣ ಕಾನೂನು ಕ್ರಮಕ್ಕೆ ಆಗ್ರಹ
ನಗರದಲ್ಲಿ ಪಾರ್ಕಿಂಗ್ ಸಮಸ್ಯೆಯಿಂದ ಈಗಾಗಲೇ ವಾಹನ ಸವಾರರು ಕಂಗೆಟ್ಟಿದ್ದಾರೆ. ಹೀಗಿರುವಾಗ ಪ್ರಭಾವಿ ರೆಸ್ಟೋರೆಂಟ್ ಒಂದರ ಮಾಲೀಕ ತನಗಾಗಿ ಸಾರ್ವಜನಿಕ ಜಾಗವನ್ನು ಮೀಸಲಿಟ್ಟುಕೊಳ್ಳುತ್ತಿರುವುದು ಕಾನೂನುಬಾಹಿರ. ಈ ಕೂಡಲೇ ಮಂಗಳೂರು ಮಹಾನಗರ ಪಾಲಿಕೆ (ಮನಪಾ) ಅಧಿಕಾರಿಗಳು ಹಾಗೂ ಸಂಚಾರಿ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, ಅಕ್ರಮ ಬ್ಯಾರಿಕೇಡ್‌ಗಳನ್ನು ಶಾಶ್ವತವಾಗಿ ಜಪ್ತಿ ಮಾಡಬೇಕು. ಅಷ್ಟೇ ಅಲ್ಲದೆ, ಪದೇ ಪದೇ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಈ ರೆಸ್ಟೋರೆಂಟ್‌ಗೆ ಭಾರಿ ಮೊತ್ತದ ದಂಡ ವಿಧಿಸಿ, ಪಾರ್ಕಿಂಗ್ ಜಾಗವನ್ನು ಸಾರ್ವಜನಿಕರ ಮುಕ್ತ ಬಳಕೆಗೆ ಬಿಟ್ಟುಕೊಡಬೇಕೆಂದು ಸಾರ್ವಜನಿಕರು ತೀವ್ರವಾಗಿ ಆಗ್ರಹಿಸಿದ್ದಾರೆ.
