ಮಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟಿ, ‘ಡಿಂಪಲ್ ಕ್ವೀನ್’ ಖ್ಯಾತಿಯ ರಚಿತಾ ರಾಮ್ ಅವರು ತುಳುನಾಡಿನ ಕಾರಣಿಕ ಹಾಗೂ ಆರಾಧ್ಯ ದೈವವಾದ ಶ್ರೀ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿ, ಹರಕೆ ಕೋಲ ಸೇವೆ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿರುವ ಪವಿತ್ರ ಕೊರಗಜ್ಜ ಕ್ಷೇತ್ರಕ್ಕೆ ಆಗಮಿಸಿದ ನಟಿ, ಭಕ್ತಿಪೂರ್ವಕವಾಗಿ ದೈವದ ದರ್ಶನ ಪಡೆದು ಹರಕೆ ತೀರಿಸಿದ್ದಾರೆ.

ನಟಿ ರಚಿತಾ ರಾಮ್ ಅವರು ಈ ಹಿಂದೆ ತಾನು ಅಂದುಕೊಂಡ ಕೆಲವು ಪ್ರಮುಖ ಕೆಲಸಗಳು ಯಶಸ್ವಿಯಾಗಿ ನೆರವೇರಿದರೆ ಬೆಂಜನಪದವಿನ ಕೊರಗಜ್ಜ ದೈವಕ್ಕೆ ಕೋಲ ಸೇವೆ ಸಲ್ಲಿಸುವುದಾಗಿ ಹರಕೆ ಹೊತ್ತಿದ್ದರು. ಅದರಂತೆ ಪ್ರಸ್ತುತ ಅವರ ಇಷ್ಟಾರ್ಥಗಳು ಸಿದ್ಧಿಯಾಗಿದ್ದು, ದೈವದ ಮೇಲಿನ ಭಕ್ತಿಯಿಂದ ಸಾಂಪ್ರದಾಯಿಕವಾಗಿ ಹರಕೆ ಕೋಲವನ್ನು ನೆರವೇರಿಸುವ ಮೂಲಕ ದೈವದ ಕೃಪೆಗೆ ಪಾತ್ರರಾಗಿದ್ದಾರೆ.

ಜಾತಿ-ಮತ ಬೇಧವಿಲ್ಲದ ಇಷ್ಟಾರ್ಥ ಸಿದ್ಧಿ ಕ್ಷೇತ್ರ:
ಬಿ.ಸಿ.ರೋಡ್ ಸಮೀಪದ ಬೆಂಜನಪದವಿನಲ್ಲಿ ಹಲವು ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿರುವ ಕೊರಗಜ್ಜ ದೈವದ ಸನ್ನಿಧಿಯು ಅಪಾರ ಪವಾಡಗಳಿಗೆ ಪ್ರಸಿದ್ಧಿಯಾಗಿದೆ. ಇಲ್ಲಿ ಜಾತಿ, ಮತ, ಭಾಷೆಯ ಬೇಧವಿಲ್ಲದೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿ ತಮ್ಮ ಕಷ್ಟ-ಕಾರ್ಪಣ್ಯಗಳನ್ನು ದೈವದ ಮುಂದೆ ತೋಡಿಕೊಳ್ಳುತ್ತಾರೆ. ಬೇಡಿಕೆ ಈಡೇರಿದ ಬಳಿಕ ಭಕ್ತರು ಅಗೇಲು, ಅಸರ್, ಬೀಡ-ಚಕ್ಕುಲಿ ಹಾಗೂ ಕೋಲ ಕೊಟ್ಟು ಹರಕೆ ತೀರಿಸುವುದು ಇಲ್ಲಿನ ವಾಡಿಕೆಯಾಗಿದೆ.

ಸಿನಿಮಾ ರಂಗದಲ್ಲಿ ರಚಿತಾ ರಾಮ್ ಬ್ಯುಸಿ:
ಸ್ಯಾಂಡಲ್‌ವುಡ್‌ನ ಬಹುತೇಕ ಎಲ್ಲಾ ಸೂಪರ್‌ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ರಚಿತಾ ರಾಮ್ ಕೈಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ಪ್ರಸ್ತುತ ಅವರು ‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ನಟನೆಯ ‘ಕ್ರಿಮಿನಲ್’ ಹಾಗೂ ನೀನಾಸಂ ಸತೀಶ್ ಜೊತೆ ‘ಅಯೋಗ್ಯ 2’ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ತಮಿಳಿನ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಜೊತೆ ಮಾತುಕತೆ ನಡೆದಿದ್ದು, ತೆಲುಗಿನಲ್ಲೂ ಎರಡು ಹೊಸ ಸಿನಿಮಾಗಳು ಇದೇ ತಿಂಗಳಲ್ಲಿ ಅನೌನ್ಸ್ ಆಗಲಿವೆ. ಈ ಎಲ್ಲಾ ಯಶಸ್ಸಿನ ಬೆನ್ನಲ್ಲೇ ನಟಿ ಕೊರಗಜ್ಜನ ಸನ್ನಿಧಿಗೆ ಬಂದು ಹರಕೆ ಸಲ್ಲಿಸಿರುವುದು ಅವರ ಅಭಿಮಾನಿಗಳಲ್ಲಿ ಮತ್ತು ಕರಾವಳಿ ಜನತೆಯಲ್ಲಿ ವಿಶೇಷ ಗಮನ ಸೆಳೆದಿದೆ.
