ನವ ದೆಹಲಿ: ಸೌದಿ ಅರೇಬಿಯಾ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ಮಧ್ಯೆಯೇ, ಯುಎಇಯ (ವಿಶ್ವಸಂಸ್ಥೆಯ ಅರಬ್ ಒಕ್ಕೂಟ) ಪ್ರಮುಖ ‘ಬರಾಕಾ’ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಭೀಕರ ಡ್ರೋನ್ ದಾಳಿ ನಡೆದಿದೆ. ಘಟನೆಯಿಂದಾಗಿ ಸ್ಥಾವರದ ಆವರಣದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ದಾಳಿಯನ್ನು ಕಟ್ಟುನಿಟ್ಟಾಗಿ ಖಂಡಿಸಿರುವ ಭಾರತದ ವಿದೇಶಾಂಗ ಸಚಿವಾಲಯವು, ಸಂಬಂಧಪಟ್ಟ ದೇಶಗಳು ತಕ್ಷಣವೇ ಸಂಯಮ ಕಾಯ್ದುಕೊಳ್ಳಬೇಕು ಮತ್ತು ರಾಜತಾಂತ್ರಿಕ ಮಾತುಕತೆಗೆ ಮರಳಬೇಕು ಎಂದು ತುರ್ತು ಕರೆ ನೀಡಿದೆ.

ಘಟನೆಯ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಭಾರತದ ವಿದೇಶಾಂಗ ಸಚಿವಾಲಯ, “ಯುಎಇಯ ಬರಾಕಾ ಪರಮಾಣು ಸೌಲಭ್ಯವನ್ನು ಗುರಿಯಾಗಿಸಿಕೊಂಡು ನಡೆಸಿರುವ ದಾಳಿಯು ಭಾರತಕ್ಕೆ ತೀವ್ರ ಕಳವಳ ಉಂಟುಮಾಡಿದೆ. ಇಂತಹ ಕೃತ್ಯಗಳು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಪ್ರಾದೇಶಿಕವಾಗಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಅಪಾಯಕಾರಿ ಪ್ರಚೋದನೆಯಾಗಿದೆ. ನಾವು ತಕ್ಷಣವೇ ಯುದ್ಧದ ವಾತಾವರಣವನ್ನು ತಿಳಿಗೊಳಿಸಲು ಮತ್ತು ರಾಜತಾಂತ್ರಿಕ ಮಾತುಕತೆಯತ್ತ ಮುಖ ಮಾಡಲು ಒತ್ತಾಯಿಸುತ್ತೇವೆ” ಎಂದು ಹೇಳಿದೆ.

ಮೂರು ಡ್ರೋನ್‌ಗಳಿಂದ ದಾಳಿ: ವಿಕಿರಣ ಸೋರಿಕೆಯಾಗಿಲ್ಲ
ಯುಎಇ ಅಧಿಕಾರಿಗಳ ಮಾಹಿತಿ ಪ್ರಕಾರ, ಪಶ್ಚಿಮ ಗಡಿಯಿಂದ ದೇಶದೊಳಗೆ ನುಗ್ಗಿದ ಮೂರು ಡ್ರೋನ್‌ಗಳು ಬರಾಕಾ ಸ್ಥಾವರವನ್ನು ಗುರಿಯಾಗಿಸಿಕೊಂಡಿದ್ದವು. ಇವುಗಳಲ್ಲಿ ಎರಡನ್ನು ಭದ್ರತಾ ಪಡೆಗಳು ಯಶಸ್ವಿಯಾಗಿ ಹೊಡೆದುರುಳಿಸಿದ್ದು, ಒಂದು ಡ್ರೋನ್ ಮಾತ್ರ ಪರಮಾಣು ಘಟಕದ ಆಂತರಿಕ ಆವರಣಕ್ಕೆ ಅಪ್ಪಳಿಸಿ ಬೆಂಕಿ ಅವಘಡಕ್ಕೆ ಕಾರಣವಾಗಿದೆ. ಅದೃಷ್ಟವಶಾತ್, ಈ ದಾಳಿಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಮತ್ತು ವಿಕಿರಣದ ಮಟ್ಟದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಯೋತ್ಪಾದಕ ಕೃತ್ಯ ಎಂದ ಯುಎಇ; ಇರಾನ್ ವಿರುದ್ಧ ಶಂಕೆ:
“ಯಾವುದೇ ಪ್ರಚೋದನೆ ಇಲ್ಲದೆ ನಡೆಸಿರುವ ಈ ಭಯೋತ್ಪಾದಕ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ದೇಶದ ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆ ತರುವ ಇಂತಹ ಕೃತ್ಯಗಳನ್ನು ಯುಎಇ ಯಾವುದೇ ಪರಿಸ್ಥಿತಿಯಲ್ಲೂ ಸಹಿಸುವುದಿಲ್ಲ” ಎಂದು ಯುಎಇ ವಿದೇಶಾಂಗ ಸಚಿವಾಲಯ ಗುಡುಗಿದೆ. ಯುಎಇ ಅಧ್ಯಕ್ಷರ ಸಲಹೆಗಾರ ಅನ್ವರ್ ಗರ್ಗಾಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ಈ ದಾಳಿಯ ಹಿಂದೆ ಇರಾನ್ ಅಥವಾ ಅದರ ಬೆಂಬಲಿತ ಉಗ್ರಗಾಮಿ ಸಂಘಟನೆಗಳ ಕೈವಾಡ ಇರುವ ಸಾಧ್ಯತೆಯನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಯುದ್ಧದ ಭೀತಿ:
ದಾಳಿಯ ಬೆನ್ನಲ್ಲೇ ಯುಎಇ ವಿದೇಶಾಂಗ ಸಚಿವರು ಸೌದಿ ಅರೇಬಿಯಾ, ಕತಾರ್, ಜೋರ್ಡಾನ್ ಸೇರಿದಂತೆ ನೆರೆ ರಾಷ್ಟ್ರಗಳೊಂದಿಗೆ ತುರ್ತು ದೂರವಾಣಿ ಮಾತುಕತೆ ನಡೆಸಿದ್ದಾರೆ. ಸೌದಿ ಅರೇಬಿಯಾ ಕೂಡ ತನ್ನ ವಾಯುಪ್ರದೇಶಕ್ಕೆ ನುಗ್ಗಿದ್ದ ಮೂರು ಶಂಕಿತ ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಘೋಷಿಸಿದೆ. ಅರಬ್ ಜಗತ್ತಿನ ಏಕೈಕ ಪರಮಾಣು ಸ್ಥಾವರವಾದ ಬರಾಕಾ, ಯುಎಇಯ ಒಟ್ಟು ವಿದ್ಯುತ್ ಬಳಕೆಯ ಶೇಕಡಾ 25 ರಷ್ಟನ್ನು ಪೂರೈಸುತ್ತದೆ. ಇಂತಹ ಸೂಕ್ಷ್ಮ ಪ್ರದೇಶದ ಮೇಲೆ ದಾಳಿ ನಡೆಸಿರುವುದು ಮಧ್ಯಪ್ರಾಚ್ಯದಲ್ಲಿ ಮತ್ತೊಂದು ದೊಡ್ಡ ಯುದ್ಧದ ಕಿಡಿಗೆ ನಾಂದಿ ಹಾಡುವ ಆತಂಕ ಮೂಡಿಸಿದೆ.