ಮುಲಾಯಂ ಪುತ್ರ ಪ್ರತೀಕ್ ಯಾದವ್ ನಿಗೂಢ ಸಾವು: ಸಾವಿನ ಮನೆಯಲ್ಲಿ ನೀಲಿ ಕಲೆಗಳ ರಹಸ್ಯ

ಲಕ್ನೋ: ಸಮಾಜವಾದಿ ಪಕ್ಷದ ಸಂಸ್ಥಾಪಕ ದಿ. ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಪುತ್ರ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಸಹೋದರ ಪ್ರತೀಕ್ ಯಾದವ್ (38) ಅವರು ಬುಧವಾರ ಮುಂಜಾನೆ ಲಕ್ನೋದಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ.

ಬುಧವಾರ ಮುಂಜಾನೆ ಸುಮಾರು 4:55ರ ಸುಮಾರಿಗೆ ಪ್ರತೀಕ್ ಅವರ ಆರೋಗ್ಯದಲ್ಲಿ ಏಕಾಏಕಿ ಏರುಪೇರಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ತುರ್ತು ಚಿಕಿತ್ಸೆಗೆ ಕರೆ ಮಾಡಿದ್ದರು. ಮೂಲಗಳ ಪ್ರಕಾರ, ಅವರು ತಮ್ಮ ನಿವಾಸದ ಅಡುಗೆ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಅವರನ್ನು ಲಕ್ನೋದ ಸಿವಿಲ್ ಆಸ್ಪತ್ರೆಗೆ (ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಆಸ್ಪತ್ರೆ) ಕರೆತರಲಾಯಿತು. ಆದರೆ, ಪರೀಕ್ಷಿಸಿದ ವೈದ್ಯರು ಅವರು ಬರುವ ಮೊದಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಸಾವಿನ ಸುತ್ತ ಅನುಮಾನ:
ಪ್ರತೀಕ್ ಅವರ ದೇಹದ ಮೇಲೆ ಕೆಲವು ನೀಲಿ ಕಲೆಗಳು ಮತ್ತು ಕಾಲಿನ ಮೇಲೆ ಸಣ್ಣ ಗಾಯದ ಗುರುತುಗಳು ಪತ್ತೆಯಾಗಿರುವುದು ಸಾವಿನ ಸುತ್ತ ಅನುಮಾನಗಳನ್ನು ಮೂಡಿಸಿವೆ. ಹೀಗಾಗಿ, ಸಾವಿನ ನಿಖರ ಕಾರಣ ತಿಳಿಯಲು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವೈದ್ಯರ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇಡೀ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ವರದಿ ಬಂದ ನಂತರವಷ್ಟೇ ಸತ್ಯಾಂಶ ತಿಳಿಯಲಿದೆ.

ಪ್ರತೀಕ್ ಯಾದವ್ ಅವರು ಮುಲಾಯಂ ಸಿಂಗ್ ಅವರ ಎರಡನೇ ಪತ್ನಿ ಸಾಧನಾ ಗುಪ್ತಾ ಅವರ ಪುತ್ರ. ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದು ಫಿಟ್‌ನೆಸ್ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಅವರ ಪತ್ನಿ ಅಪರ್ಣಾ ಯಾದವ್ ಬಿಜೆಪಿ ನಾಯಕಿಯಾಗಿದ್ದು, ಉತ್ತರ ಪ್ರದೇಶ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷೆಯಾಗಿದ್ದಾರೆ. ಪತಿಯ ನಿಧನದ ಸಮಯದಲ್ಲಿ ಅಪರ್ಣಾ ಅವರು ಅಸ್ಸಾಂ ಪ್ರವಾಸದಲ್ಲಿದ್ದರು ಎನ್ನಲಾಗಿದೆ.

ಪ್ರತೀಕ್ ಯಾದವ್ ಅವರ ನಿಧನಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಸಹೋದರನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅಖಿಲೇಶ್ ಯಾದವ್ ಮತ್ತು ಸಂಸದೆ ಡಿಂಪಲ್ ಯಾದವ್ ಅವರು ತಮ್ಮೆಲ್ಲಾ ರಾಜಕೀಯ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಲಕ್ನೋಗೆ ಆಗಮಿಸಿದ್ದಾರೆ. ಸಮಾಜವಾದಿ ಪಕ್ಷವು ಕೂಡ ಅಧಿಕೃತವಾಗಿ ತನ್ನ ಶೋಕವನ್ನು ವ್ಯಕ್ತಪಡಿಸಿದೆ.

ಕಳೆದ ಕೆಲವು ದಿನಗಳಿಂದ ನರಸಂಬಂಧಿ ಕಾಯಿಲೆಯಿಂದ ಪ್ರತೀಕ್ ಬಳಲುತ್ತಿದ್ದರು ಎನ್ನಲಾಗಿದ್ದು, ಸಾವಿನ ನೈಜ ಕಾರಣಕ್ಕಾಗಿ ಮರಣೋತ್ತರ ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.

error: Content is protected !!