ನೀಟ್‌ ಪರೀಕ್ಷೆಯನ್ನೇ ನುಂಗಿದ ಪ್ರವೇಟ್‌ ಮಾಫಿಯಾ: 9 ಮಂದಿ ಬಂಧನ- ಸಿಬಿಐ ತನಿಖೆಗೆ ಆದೇಶ

ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿರುವ ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಅತ್ಯಂತ ವ್ಯವಸ್ಥಿತವಾದ ಅಂತರರಾಜ್ಯ ಜಾಲವನ್ನು ಪತ್ತೆಹಚ್ಚಿದ್ದಾರೆ.

ಐದು ರಾಜ್ಯಗಳಲ್ಲಿ ಹರಡಿಕೊಂಡಿರುವ ಈ ಜಾಲವು ಪರೀಕ್ಷೆಗೂ ಮೊದಲೇ ಪ್ರಶ್ನೆಪತ್ರಿಕೆಯನ್ನು ಹಂಚಿಕೆ ಮಾಡಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರವು ಪ್ರಕರಣದ ಸಂಪೂರ್ಣ ತನಿಖೆಯನ್ನು ಸಿಬಿಐಗೆ ವಹಿಸಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಈಗ ಮರುಪರೀಕ್ಷೆಯ ಆತಂಕದಲ್ಲಿದ್ದಾರೆ.

ತನಿಖಾ ಮೂಲಗಳ ಪ್ರಕಾರ, ಈ ಹಗರಣದ ಸಂಚು ಮಹಾರಾಷ್ಟ್ರದ ನಾಸಿಕ್‌ನಲ್ಲಿ ರೂಪಿತವಾಗಿತ್ತು. ಅಲ್ಲಿಂದ ಪ್ರಶ್ನೆಪತ್ರಿಕೆಯ ಭೌತಿಕ ಪ್ರತಿಯನ್ನು ಹರಿಯಾಣಕ್ಕೆ ಸಾಗಿಸಿ, ಅಲ್ಲಿ ಐದು ವಿಭಿನ್ನ ಸೆಟ್‌ಗಳಾಗಿ ಪ್ರತಿ ಮಾಡಲಾಗಿತ್ತು. ನಂತರ ಈ ಪತ್ರಿಕೆಗಳನ್ನು ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಅಭ್ಯರ್ಥಿಗಳಿಗೆ ವಿತರಿಸಲಾಗಿತ್ತು.

ರಾಜಸ್ಥಾನ ಪೊಲೀಸರ ಎಸ್.ಒ.ಜಿ (SOG) ತಂಡವು “Private Mafia” ಹೆಸರಿನ ವಾಟ್ಸಾಪ್ ಗುಂಪನ್ನು ಪತ್ತೆಹಚ್ಚಿದೆ. 400ಕ್ಕೂ ಹೆಚ್ಚು ಸದಸ್ಯರಿದ್ದ ಈ ಗುಂಪಿನಲ್ಲಿ ಸೋರಿಕೆಯಾದ ಪತ್ರಿಕೆಗಳನ್ನು ಹಂಚಿಕೊಳ್ಳಲಾಗುತ್ತಿತ್ತು. ಅಲ್ಲದೆ, ಪತ್ರಿಕೆಯ ಪ್ರತಿಗಳಿಗಾಗಿ ಅಭ್ಯರ್ಥಿಗಳಿಂದ ₹30,000 ರಿಂದ ₹5 ಲಕ್ಷದವರೆಗೆ ಹಣ ವಸೂಲಿ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ರಾಜಸ್ಥಾನದಲ್ಲಿ ಪತ್ತೆಯಾದ ಕೈಬರಹದ ಪತ್ರಿಕೆಯಲ್ಲಿ ಅಸಲಿ ಪರೀಕ್ಷೆಯ ಸುಮಾರು 140 ಪ್ರಶ್ನೆಗಳು ಹೂಬಹೂ ತಾಳೆಯಾಗಿರುವುದು ಹಗರಣದ ತೀವ್ರತೆಯನ್ನು ಸಾಬೀತುಪಡಿಸಿದೆ.

ಈ ಹಗರಣದ ಮಾಸ್ಟರ್‌ಮೈಂಡ್ ಎನ್ನಲಾದ ಮನೀಶ್ ಯಾದವ್ ಮತ್ತು ವಿತರಕ ರಾಕೇಶ್ ಮಾಂಡವರಿಯಾ ಎಂಬುವವರನ್ನು ಜೈಪುರದಲ್ಲಿ ಬಂಧಿಸಲಾಗಿದೆ. ಈವರೆಗೆ ಒಟ್ಟು 9 ಮಂದಿಯನ್ನು ಬಂಧಿಸಲಾಗಿದ್ದು, 45ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕೇರಳದಲ್ಲಿ ಕಲಿಯುತ್ತಿರುವ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬನ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಪ್ರಶ್ನೆಪತ್ರಿಕೆ ಸೋರಿಕೆಯಿಂದ ಪರೀಕ್ಷೆಯ ಪಾರದರ್ಶಕತೆಗೆ ಧಕ್ಕೆ ಬಂದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಟ್-ಯುಜಿ 2026 ಪರೀಕ್ಷೆಯನ್ನು ರದ್ದುಗೊಳಿಸಿದೆ.

error: Content is protected !!