ದಳಪತಿ ಜೋಸೆಫ್ ವಿಜಯ್‌ ಪಟ್ಟಾಭಿಷೇಕಕ್ಕೆ ಅರ್ಧಾಂಗಿ ಸಂಗೀತಾ ಬರಲಿಲ್ಲ ಯಾಕೆ?

ಚೆನ್ನೈ: ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಭವ್ಯ ಸಮಾರಂಭದಲ್ಲಿ ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ಅವರ ಅನುಪಸ್ಥಿತಿ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಭಾನುವಾರ ನಡೆದ ಈ ಪಟ್ಟಾಭಿಷೇಕದ ಕ್ಷಣದಲ್ಲಿ ಪತ್ನಿ ಹಾಜರಿರದಿರುವುದು ಹಲವು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.

ವಿಶ್ವಾಸಾರ್ಹ ಮೂಲಗಳ ಮಾಹಿತಿಯ ಪ್ರಕಾರ, ಪ್ರಮಾಣವಚನ ಸ್ವೀಕಾರ ಸಮಾರಂಭದ ವೇಳೆ ಸಂಗೀತಾ ಅವರು ಚೆನ್ನೈನಲ್ಲಿ ಇರಲಿಲ್ಲ. ಶ್ರೀಲಂಕಾ ತಮಿಳು ಮೂಲದ ಅವರ ತಂದೆ ಲಂಡನ್‌ನಲ್ಲಿ ನೆಲೆಸಿದ್ದು, ಅಲ್ಲಿ ಸುಮಾರು 450 ಕೋಟಿ ರೂಪಾಯಿ ಮೌಲ್ಯದ ಬೃಹತ್ ಕುಟುಂಬ ಉದ್ಯಮವನ್ನು ಹೊಂದಿದ್ದಾರೆ. ಪ್ರಸ್ತುತ ಸಂಗೀತಾ ಅವರು ಲಂಡನ್‌ನಲ್ಲೇ ವಾಸ್ತವ್ಯ ಹೂಡಿದ್ದು, ಈ ಉದ್ಯಮದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕಾಗಿ ಅವರು ಸಮಾರಂಭಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ.

ಲಂಡನ್‌ನಲ್ಲಿ ನೆಲೆಸಿದ್ದ ಸಂಗೀತಾ ಅವರು ವಿಜಯ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ನಟ ವಿಜಯ್ ಅವರಿಗೆ ಅಭಿಮಾನಿಯಾಗಿ ಪತ್ರ ಬರೆಯುತ್ತಿದ್ದ ಅವರು, ನಂತರ ಅವರನ್ನು ಭೇಟಿಯಾಗಲೆಂದೇ ಚೆನ್ನೈಗೆ ಬಂದಿದ್ದರು. 1999ರಲ್ಲಿ ಇಬ್ಬರೂ ವಿವಾಹವಾದರು. ಅಂದಿನಿಂದ ವಿಜಯ್ ಅವರ ಸಿನಿಮಾ ಬದುಕಿನ ಏಳುಬೀಳುಗಳಲ್ಲಿ ಸಂಗೀತಾ ಅವರು ಬೆನ್ನೆಲುಬಾಗಿ ನಿಂತಿದ್ದರು.

ಚರ್ಚೆಗೆ ಗ್ರಾಸವಾದ ಗೈರುಹಾಜರಿ:
ಆದರೆ, ಕಳೆದ ಕೆಲವು ಸಮಯದಿಂದ ವಿಜಯ್ ಮತ್ತು ಸಂಗೀತಾ ದಂಪತಿ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ರಾಜಕೀಯವಾಗಿ ವಿಜಯ್ ಅವರಿಗೆ ಇದು ಅತ್ಯಂತ ಪ್ರಮುಖ ಘಟ್ಟವಾಗಿದ್ದರೂ, ಪತ್ನಿ ಪಕ್ಕದಲ್ಲಿ ಇಲ್ಲದಿರುವುದು ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ. ಕೇವಲ ವ್ಯವಹಾರದ ಕಾರಣಕ್ಕಾಗಿ ಅವರು ಗೈರಾಗಿದ್ದಾರೆಯೇ ಅಥವಾ ವೈಯಕ್ತಿಕ ಕಾರಣಗಳಿವೆಯೇ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

error: Content is protected !!