ಮಂಗಳೂರು: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ (ICAI) ಮಂಗಳೂರು ಶಾಖೆಯ ವತಿಯಿಂದ ಚಾರ್ಟರ್ಡ್ ಅಕೌಂಟೆಂಟ್ ಸದಸ್ಯರಿಗಾಗಿ ‘ಅಧಿಗಮ – ಜ್ಞಾನ ಬಲವರ್ಧನೆ’ ಎಂಬ ಶೀರ್ಷಿಕೆಯಡಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಖೆಯ ಅಧ್ಯಕ್ಷರಾದ ಸಿಎ ಡ್ಯಾನಿಯಲ್ ಮಾರ್ಷ್ ಪೆರಿಯೆರಾ ತಿಳಿಸಿದರು. ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು.

ನಗರದ ವಾಲೆನ್ಸಿಯಾದಲ್ಲಿರುವ ‘ವಾಲ್ಮಾರ್ ಕನ್ವೆನ್ಷನ್ ಸೆಂಟರ್’ನಲ್ಲಿ ಮೇ 15 ಮತ್ತು 16 ರಂದು ಈ ಬೃಹತ್ ಸಮ್ಮೇಳನ ನಡೆಯಲಿದೆ. ದೇಶದ ವಿವಿಧ ಭಾಗಗಳಿಂದ ಸುಮಾರು 500ಕ್ಕೂ ಹೆಚ್ಚು ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ವೃತ್ತಿಪರರು ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ವೃತ್ತಿಯಲ್ಲಿನ ಉದಯೋನ್ಮುಖ ಬೆಳವಣಿಗೆಗಳು, ತಂತ್ರಜ್ಞಾನ ಆಧಾರಿತ ರೂಪಾಂತರ ಮತ್ತು ಪ್ರಸಕ್ತ ಹಣಕಾಸು ನಿಯಂತ್ರಣ ಬದಲಾವಣೆಗಳ ಬಗ್ಗೆ ವೃತ್ತಿಪರರನ್ನು ಸಜ್ಜುಗೊಳಿಸುವುದು ಈ ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.

ಮೇ 15ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಸಹ-ಕುಲಾಧಿಪತಿಗಳಾದ ಪ್ರೊ. ಶಾಂತಾರಾಮ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮ್ಮೇಳನವು ಒಟ್ಟು ಏಳು ತಾಂತ್ರಿಕ ಅಧಿವೇಶನಗಳನ್ನು ಒಳಗೊಂಡಿರಲಿದ್ದು, ಸೈಬರ್ ಭದ್ರತೆ, ಉತ್ತರಾಧಿಕಾರ ಯೋಜನೆ (Succession Planning), ಡಿಜಿಟಲ್ ಯುಗದಲ್ಲಿನ ವೃತ್ತಿಪರ ಅವಕಾಶಗಳು ಮತ್ತು 2025ರ ಆದಾಯ ತೆರಿಗೆ ಕಾಯ್ದೆಯಡಿ ಮರು-ಮೌಲ್ಯಮಾಪನ ಪ್ರಕ್ರಿಯೆಗಳ ಕುರಿತು ದೇಶದ ಖ್ಯಾತ ವಿಷಯ ತಜ್ಞರು ಮಾಹಿತಿ ನೀಡಲಿದ್ದಾರೆ.

ಸಮ್ಮೇಳನದಲ್ಲಿ ಐಸಿಎಐ ಕೇಂದ್ರ ಮಂಡಳಿ ಸದಸ್ಯರಾದ ಸಿಎ ದಯಾನಿವಾಸ ಶರ್ಮಾ, ಸಿಎ ಪ್ರಮೋದ್ ಜೈನ್, ಸಿಎ ಕಾರ್ತಿಕೇಯ ಶೆಣೈ ಸೇರಿದಂತೆ ಹಲವು ಗಣ್ಯರು ವಿವಿಧ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. ಅಲ್ಲದೆ, ‘ವಿಷನ್ ಮಂಗಳೂರು 2030’ ಎಂಬ ವಿಷಯದ ಕುರಿತು ವಿಶೇಷ ಪ್ಯಾನಲ್ ಚರ್ಚೆ ನಡೆಯಲಿದ್ದು, ಇದರಲ್ಲಿ ಉದ್ಯಮಿಗಳಾದ ಮಿಥುನ್ ಡಿಸೋಜಾ ಮತ್ತು ಅಧೀಕ್ಷಾ ಅಮೀನ್ ಭಾಗವಹಿಸಲಿದ್ದಾರೆ ಎಂದು ಪೆರಿಯೆರಾ ತಿಳಿಸಿದರು.

ಈ ರಾಷ್ಟ್ರೀಯ ಸಮ್ಮೇಳನಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್, ಮಾಹೆ (MAHE), ಎಂಆರ್‌ಪಿಎಲ್ (MRPL) ಮತ್ತು ಎನ್‌ಎಂಪಿಟಿ (NMPT) ಸಂಸ್ಥೆಗಳು ಸಹ-ಪ್ರಾಯೋಜಕತ್ವ ನೀಡುತ್ತಿವೆ. ಸುದ್ದಿಗೋಷ್ಠಿಯಲ್ಲಿ ಶಾಖೆಯ ಉಪಾಧ್ಯಕ್ಷರಾದ ಸಿಎ ಮಮತಾ ರಾವ್, ಕಾರ್ಯದರ್ಶಿ ಸಿಎ ಬಾಲಸುಬ್ರಹ್ಮಣ್ಯ ಎನ್., ಖಜಾಂಚಿ ಸಿಎ ನಿತಿನ್ ಬಾಳಿಗಾ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.