ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ: ಬಡವನ ಬಾಟಲಿಗೆ ಬಿಸಿ ಮುಟ್ಟಿಸಿದ ಸರ್ಕಾರ

ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಸಾಮಾನ್ಯ ಜನರ ಮೇಲೆ ತೆರಿಗೆಯ ಭಾರ ಹೊರಿಸುತ್ತಿರುವ ರಾಜ್ಯ ಸರ್ಕಾರ, ಈಗ ಅಬಕಾರಿ ನೀತಿಯ ಹೆಸರಿನಲ್ಲಿ ಬಡವರ ಜೇಬಿಗೆ ನೇರವಾಗಿ ಕತ್ತರಿ ಹಾಕಿದೆ! ಸೋಮವಾರದಿಂದ ಜಾರಿಗೆ ಬಂದಿರುವ ಹೊಸ ಅಬಕಾರಿ ನೀತಿಯು ಪಕ್ಕಾ “ಬಡವರ ವಿರೋಧಿ” ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ದಿನವಿಡೀ ಕಷ್ಟಪಟ್ಟು ದುಡಿಯುವ ಕೂಲಿಕಾರ್ಮಿಕರು ಕುಡಿಯುವ ಮದ್ಯದ ಬೆಲೆಯನ್ನು ಶೇ. 30 ರಷ್ಟು ಏರಿಸಿದೆ.

ಸರ್ಕಾರದ ಈ ಅಸಂಬದ್ಧ ನೀತಿಯಿಂದಾಗಿ 80 ರೂಪಾಯಿ ಇದ್ದ ಕ್ವಾರ್ಟರ್ ಬೆಲೆ ಈಗ ನೂರರ ಗಡಿ ದಾಟಿದೆ. ಹಗಲಿರುಳು ಬೆವರಿಳಿಸಿ ದುಡಿಯುವ ಜನಸಾಮಾನ್ಯರಿಗೆ ಒಂದೂವರೆ ಪಟ್ಟು ಹೆಚ್ಚು ಹಣ ವಸೂಲಿ ಮಾಡುವ ಸರ್ಕಾರ, ಲಕ್ಷಾಂತರ ರೂಪಾಯಿ ಸಂಬಳ ಪಡೆಯುವವರು ಕುಡಿಯುವ ʻಪ್ರೀಮಿಯಂ’ ಮದ್ಯದ ಬೆಲೆಯನ್ನು ಶೇ. 20 ರಷ್ಟು ಇಳಿಸಿದೆ! ಅಂದರೆ, ಬಡವನ ರಕ್ತ ಹೀರಿದ ಹಣದಲ್ಲಿ ಶ್ರೀಮಂತನಿಗೆ ವಿದೇಶಿ ಬ್ರ್ಯಾಂಡ್ ಮದ್ಯವನ್ನು ಅಗ್ಗವಾಗಿ ನೀಡಲಾಗುತ್ತಿದೆ.

ನಮ್ಮ ನೆಲದ ಮಣ್ಣಿನ ವಾಸನೆ ಇರುವ ಸ್ಥಳೀಯ ಮದ್ಯ ತಯಾರಿಕಾ ಘಟಕಗಳನ್ನು ಬೀಗ ಹಾಕುವಂತೆ ಮಾಡಿ, ಬಹುರಾಷ್ಟ್ರೀಯ ಕಂಪನಿಗಳಿಗೆ (MNC) ಕೆಂಪು ಹಾಸು ಹಾಸಿ ಸ್ವಾಗತಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. 16 ಸ್ಲ್ಯಾಬ್‌ಗಳನ್ನು 8ಕ್ಕೆ ಇಳಿಸಿರುವುದೇ ದೊಡ್ಡ ಕಂಪನಿಗಳ ಲಾಭಕ್ಕಾಗಿ ಎನ್ನುವುದು ಜಗಜ್ಜಾಹೀರಾಗಿದೆ. ಬಜೆಟ್ ಮದ್ಯವನ್ನೇ ನಂಬಿಕೊಂಡಿದ್ದ ಸಣ್ಣ ಉದ್ದಿಮೆದಾರರು ಬೀದಿಗೆ ಬೀಳುತ್ತಿದ್ದರೆ, ಸರ್ಕಾರ ಮಾತ್ರ ವಿದೇಶಿ ಕಂಪನಿಗಳ ಹಿತ ಕಾಯುವಲ್ಲಿ ನಿರತವಾಗಿದೆ.

ರಾಜ್ಯದ ಅಬಕಾರಿ ಆದಾಯಕ್ಕೆ ಶೇ. 75 ರಷ್ಟು ಕೊಡುಗೆ ನೀಡುವ ಸಾಮಾನ್ಯ ವರ್ಗದ ಮೇಲೆಯೇ ಇಷ್ಟೊಂದು ದೊಡ್ಡ ಮಟ್ಟದ ತೆರಿಗೆ ದಾಳಿ ನಡೆಸಿದೆ. ಬೆಲೆ ಏರಿಕೆಯ ಬಿಸಿಯಲ್ಲಿ ಬೆಂದು ಹೋಗುತ್ತಿರುವ ಜನಸಾಮಾನ್ಯರಿಗೆ ಈ ಅಬಕಾರಿ ಶಾಕ್ ಗಾಯದ ಮೇಲೆ ಬರೆ ಎಳೆದಂತಿದೆ.

error: Content is protected !!