ಶೃಂಗೇರಿ ಚುನಾವಣೆ ಟ್ವಿಸ್ಟ್: ರಾಜೇಗೌಡ ಶಾಸಕತ್ವ ಮರುಸ್ಥಾಪನೆ, ಸುಪ್ರೀಂನಿಂದ ಮರು ಎಣಿಕೆ ಫಲಿತಾಂಶಕ್ಕೆ ತಡೆ!

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಹಗ್ಗಜಗ್ಗಾಟಕ್ಕೆ ಇದೀಗ ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ತಿರುವು ಸಿಕ್ಕಿದೆ. ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರ ಗೆಲುವನ್ನು ಘೋಷಿಸಿದ್ದ ಮರು ಮತ ಎಣಿಕೆ ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರ ಶಾಸಕತ್ವವನ್ನು ಮರುಸ್ಥಾಪಿಸಲು ಆದೇಶಿಸಿದೆ.

ಏನಿದು ಪ್ರಕರಣ?
2023ರ ವಿಧಾನಸಭಾ ಚುನಾವಣೆಯ ಫಲಿತಾಂಶದ ವಿರುದ್ಧ ಹೈಕೋರ್ಟ್‌ನಲ್ಲಿ ನಡೆದ ಕಾನೂನು ಹೋರಾಟದ ಫಲವಾಗಿ, ಕಳೆದ ಮೇ 2ರಂದು ಅಂಚೆ ಮತಗಳ (Postal Ballots) ಮರು ಮತ ಎಣಿಕೆ ನಡೆದಿತ್ತು. ಈ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರು 52 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಲಾಗಿತ್ತು. ಚುನಾವಣಾ ಆಯೋಗವು ಜೀವರಾಜ್ ಅವರಿಗೆ ಗೆಲುವಿನ ಪ್ರಮಾಣ ಪತ್ರವನ್ನೂ ನೀಡಿತ್ತು.

ರಾಜೇಗೌಡ ಅವರ ಸುಪ್ರೀಂ ಹೋರಾಟ:
ಮರು ಮತ ಎಣಿಕೆ ವೇಳೆ ವ್ಯಾಪಕ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ರಾಜೇಗೌಡ ಅವರು ಸುಪ್ರೀಂಕೋರ್ಟ್‌ನಲ್ಲಿ ಸಿವಿಲ್ ಮೇಲ್ಮನವಿ ಸಲ್ಲಿಸಿದ್ದರು. “ಚುನಾವಣೆಯ ವೇಳೆ ಸಿಂಧುವಾಗಿದ್ದ ಮತಗಳು ಮರು ಎಣಿಕೆಯಲ್ಲಿ ಅಸಿಂಧುವಾಗಿವೆ, ಮತಪತ್ರಗಳಿದ್ದ ಕವರ್ ಹಾಗೂ ಬಾಕ್ಸ್‌ಗಳ ಸೀಲ್ ಒಡೆಯಲಾಗಿದೆ” ಎಂದು ಅವರು ಗಂಭೀರ ಆರೋಪ ಮಾಡಿದ್ದರು.

ಸುಪ್ರೀಂಕೋರ್ಟ್ ಆದೇಶ:
ಸೋಮವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂಜಯ್ ಕುಮಾರ್ ಹಾಗೂ ವಿನೋದ್ ಚಂದ್ರ ಅವರಿದ್ದ ಪೀಠವು ಈ ಕೆಳಗಿನ ಆದೇಶಗಳನ್ನು ನೀಡಿದೆ:
-ಜೀವರಾಜ್ ಅವರನ್ನು ಶಾಸಕರನ್ನಾಗಿ ಘೋಷಿಸಿರುವುದಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ.
-ಕಾಂಗ್ರೆಸ್‌ನ ರಾಜೇಗೌಡ ಅವರ ಶಾಸಕತ್ವವನ್ನು ಮರುಸ್ಥಾಪಿಸಲು ಸೂಚಿಸಲಾಗಿದೆ.
-ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 21ಕ್ಕೆ ಮುಂದೂಡಲಾಗಿದೆ.

ಈ ಆದೇಶದೊಂದಿಗೆ ಶೃಂಗೇರಿ ಕ್ಷೇತ್ರದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾಕ್ಕೆ ಸದ್ಯಕ್ಕೆ ವಿರಾಮ ಬಿದ್ದಂತಾಗಿದ್ದು, ಮೇ 21ರ ಅಂತಿಮ ವಿಚಾರಣೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

error: Content is protected !!