ಕ್ಷುಲ್ಲಕ ಕಾರಣಕ್ಕೆ 6 ತಿಂಗಳ ಮಗು ಸೇರಿ ಐವರ ಮೇಲೆ ಆ್ಯಸಿಡ್ ದಾಳಿ!!

ಹುಬ್ಬಳ್ಳಿ: ವ್ಯಕ್ತಿಯೋರ್ವ ಕ್ಷುಲ್ಲಕ ಕಾರಣಕ್ಕೆ 6 ತಿಂಗಳ ಮಗು ಸೇರಿ ಐವರ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಹುಬ್ಬಳ್ಳಿಯ ತಾರಿಹಾಳದ ವಾಜಪೇಯಿ ನಗರದಲ್ಲಿ ನಡೆದಿದೆ.

ನಾದಿನಿಯರ ಫೋಟೋ ತೆಗೆದ ವಿಚಾರಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ಹೋದ ಪರಿಣಾಮ ಸುರೇಶ್​ ಎಂಬಾತ ಕುಟುಂಬದ ಐವರ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಆರೋಪ ಕೇಳಿಬಂದಿದೆ. ಘಟನೆಯಲ್ಲಿ 6 ತಿಂಗಳ ಮಗುವಿನ ಮುಖ, ಬಾಯಿಗೂ ಆ್ಯಸಿಡ್​​ ತಗುಲಿದ್ದು, ರಾಜೇಶ್ವರಿ (24) ಎಂಬವರ ಸ್ಥಿತಿ ಚಿಂತಾಜನಕವಾಗಿದೆ.

ನಾದಿನಿಯರ ವಿಚಾರವಾಗಿ ಸುರೇಶ್ ಮತ್ತು ಆತನ ಪತ್ನಿ ರಾಜೇಶ್ವರಿ ನಡುವೆ ಜಗಳ ನಡೆದಿತ್ತು. ನಾದಿನಿಯರ ಫೋಟೋ ತೆಗೆಯದಂತೆ ಗಂಡನಿಗೆ ರಾಜೇಶ್ವರಿ ತಾಕೀತು ಮಾಡಿದ್ದರೂ ಮತ್ತೆ ಫೋಟೋ ತೆಗೆದು ಸುರೇಶ್ ಕಿರಿಕ್ ಮಾಡುತ್ತಿದ್ದ. ಇದೇ ವಿಚಾರವಾಗಿ ದಂಪತಿ ನಡುವಿನ ಜಗಳ ಆ್ಯಸಿಡ್​​ ದಾಳಿಯ ಹಂತಕ್ಕೆ ಹೋಗಿದೆ. ಘಟನೆಯಲ್ಲಿ ಶ್ರುತಿ ಹಾಗೂ ರೇಷ್ಮಾ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ವತಃ ಆರೋಪಿ ಸುರೇಶ್​ ಬೈಲ್​ ಪತ್ತಾರ(33) ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುಗಳನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ಸುರೇಶ್​ ಬೈಲ್​ ಪತ್ತಾರ ತಾಮ್ರ, ಹಿತ್ತಾಳೆ ಕೆಲಸಗಳನ್ನು ಮಾಡಿಕೊಂಡಿದ್ದ. ನಾದಿನಿಯರ ವಿಚಾರ ಸಂಬಂಧದ ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ತಾಮ್ರ, ಹಿತ್ತಾಳೆ ತೊಳೆಯಲು ಬಳಸುತ್ತಿದ್ದ ಕೆಮಿಕಲ್​​ನಿಂದಲೇ ಈತ ಕುಟುಂಬದ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಈ ವೇಳೆ ಸುರೇಶ್​​ ಮೈಮೇಲೆಯೂ ಆ್ಯಸಿಡ್​​ ಚೆಲ್ಲಿದ ಪರಿಣಾಮ ಆತನೂ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿಕೊಂಡಿದ್ದಾನೆ.

error: Content is protected !!