ನಕಲಿ ನಂಬರ್ ಪ್ಲೇಟ್ ಕಾರು, ಗ್ಲಾಕ್ ಪಿಸ್ತೂಲ್: ಚಂದ್ರನಾಥ್ ರಥ್ ಹತ್ಯೆಗೆ ಹಂತಕರು ರೂಪಿಸಿದ ಮಾಸ್ಟರ್ ಸ್ಕೆಚ್ ರಿವೀಲ್ಡ್!

ಮಧ್ಯಮಗ್ರಾಮ (ಕೋಲ್ಕತ್ತಾ): ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ರಕ್ತದ ಓಕುಳಿ ನಿಲ್ಲುತ್ತಿಲ್ಲ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಅತ್ಯಂತ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ಹತ್ಯೆಯು ಕೇವಲ ಒಂದು ಆಕಸ್ಮಿಕ ದಾಳಿಯಲ್ಲ, ಬದಲಿಗೆ ಇದು ಅತ್ಯಂತ ವೃತ್ತಿಪರ ಶೂಟರ್‌ಗಳು ರೂಪಿಸಿದ ಭೀಕರ ‘ಡೆತ್ ಸ್ಕೆಚ್’ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ. ಮನೆಯ ಹತ್ತಿರವೇ ಅಡ್ಡಗಟ್ಟಿ ಗುಂಡಿಕ್ಕಿದ ರೀತಿ ಹಂತಕರ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ.

ಚಂದ್ರನಾಥ್ ರಥ್ ಅವರ ಪ್ರತಿ ನಡೆಯ ಮೇಲೆ ಹಂತಕರು ಕಳೆದ ಎರಡು-ಮೂರು ದಿನಗಳಿಂದ ಹದ್ದಿನ ಕಣ್ಣಿಟ್ಟಿದ್ದರು. ಅವರು ಮನೆಗೆ ಬರುವ ಸಮಯ, ಬಳಸುವ ದಾರಿ ಮತ್ತು ಭದ್ರತೆಯ ಬಗ್ಗೆ ಸಂಪೂರ್ಣವಾಗಿ ʻರೆಕ್ಕಿ’ ನಡೆಸಲಾಗಿತ್ತು. ಬುಧವಾರ ರಾತ್ರಿ 10:30ರ ಸುಮಾರಿಗೆ ಅವರು ತಮ್ಮ ನಿವಾಸಕ್ಕೆ ಕೇವಲ 170 ಮೀಟರ್ ದೂರದಲ್ಲಿದ್ದಾಗಲೇ ಹಂತಕರು ತಮ್ಮ ಪ್ಲಾನ್ ಜಾರಿಗೆ ತಂದಿದ್ದಾರೆ. ಮನೆಯ ಸುರಕ್ಷಿತ ವಲಯಕ್ಕೆ ತಲುಪುವ ಮೊದಲೇ ರಥ್ ಅವರನ್ನು ಮುಗಿಸಲು ಹಂತಕರು ಸ್ಕೆಚ್ ಹಾಕಿದ್ದರು.

ಹಂತಕರು ಬಳಸಿದ ತಂತ್ರ ಅತ್ಯಂತ ಸಿನಿಮೀಯ ಮತ್ತು ಸಂಚಿನಿಂದ ಕೂಡಿತ್ತು. ರಥ್ ಅವರ ಕಾರು ಸಾಗುತ್ತಿದ್ದ ದಾರಿಯಲ್ಲಿ ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಒಂದು ವಾಹನವನ್ನು ಅಡ್ಡಲಾಗಿ ತಂದು ನಿಲ್ಲಿಸಲಾಯಿತು. ರಥ್ ಅವರ ಕಾರು ಮುಂದೆ ಹೋಗಲು ಸಾಧ್ಯವಾಗದಂತೆ ದಾರಿಯನ್ನು ಸಂಪೂರ್ಣವಾಗಿ ‘ಬ್ಲಾಕ್’ ಮಾಡಲಾಯಿತು. ತನಿಖೆಯ ವೇಳೆ ಈ ಕಾರಿನ ಚಾಸಿಸ್ ಸಂಖ್ಯೆಯನ್ನು ಕೂಡ ತಿದ್ದಿರುವುದು ಪತ್ತೆಯಾಗಿದ್ದು, ಪೊಲೀಸರನ್ನು ದಿಕ್ಕು ತಪ್ಪಿಸಲು ಹಂತಕರು ಪಕ್ಕಾ ಪ್ಲಾನ್ ಮಾಡಿದ್ದರು.

Latest and Breaking News on NDTV

ಹೃದಯಕ್ಕೇ ಗುರಿ: ಹಾರಿತು ಗ್ಲಾಕ್ ಪಿಸ್ತೂಲ್‌ನ ಗುಂಡುಗಳು!
ದಾರಿ ತಡೆದ ಕೂಡಲೇ ಸಜ್ಜಾಗಿದ್ದ ನಾಲ್ಕು ಮೋಟಾರ್ ಸೈಕಲ್‌ಗಳಲ್ಲಿ ಬಂದ ಹಂತಕರು ರಥ್ ಅವರ ಕಾರನ್ನು ಸುತ್ತುವರಿದರು. ಯಾವುದೇ ಮಾತುಕತೆ ನಡೆಸದೆ, ಅತ್ಯಂತ ಸಮೀಪದಿಂದ (Point-blank range) ಸರಣಿ ಗುಂಡಿನ ದಾಳಿ ನಡೆಸಿದರು. ದಾಳಿಕೋರರು ಅತ್ಯಾಧುನಿಕ ʻಗ್ಲಾಕ್ 47X’ ಮಾದರಿಯ ಶಸ್ತ್ರಾಸ್ತ್ರಗಳನ್ನು ಬಳಸಿದ್ದಾರೆ ಎಂದು ಶಂಕಿಸಲಾಗಿದೆ. ಚಂದ್ರನಾಥ್ ಅವರ ಎದೆಗೆ ಗುರಿಯಿಟ್ಟು ಹಾರಿಸಿದ ಗುಂಡುಗಳು ನೇರವಾಗಿ ಹೃದಯವನ್ನೇ ಸೀಳಿ ಹೊರಬಂದಿದ್ದವು. ಈ ದಾಳಿಯಲ್ಲಿ ಚಂದ್ರನಾಥ್ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕುಸಿದು ಬಿದ್ದರು.

ಈ ಸ್ಕೆಚ್‌ನ ಹಿಂದಿರುವ ನಿಜವಾದ ಸೂತ್ರಧಾರಿಗಳು ಯಾರು? ಎಂಬ ಪ್ರಶ್ನೆ ಈಗ ಬಂಗಾಳದಾದ್ಯಂತ ಸಂಚಲನ ಮೂಡಿಸಿದೆ.

error: Content is protected !!