ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವದ ಅಟ್ಟಹಾಸಕ್ಕೆ ಬ್ರೇಕ್ ಬೀಳುವ ಲಕ್ಷಣಗಳೇ ಕಾಣುತ್ತಿಲ್ಲ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಅತ್ಯಂತ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಮೋಟಾರ್ ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ ಕೆಲವೇ ಗಂಟೆಗಳ ಅಂತರದಲ್ಲಿ ರಾಜ್ಯದಲ್ಲಿ ಮತ್ತೊಂದು ಭೀಕರ ಘಟನೆ ಸಂಭವಿಸಿದೆ. ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕಿ ರತ್ನಾ ದೇಬ್ನಾಥ್ ಅವರ ನಿವಾಸದ ಕೂಗಳತೆ ದೂರದಲ್ಲೇ ಸಂಭವಿಸಿರುವ ಬಾಂಬ್ ಸ್ಫೋಟವು ಇಡೀ ಉತ್ತರ 24 ಪರಗಣ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.

ಪಾಣಿಹಟಿಯ ವಾರ್ಡ್ ಸಂಖ್ಯೆ 2 ರ ದತ್ತಾ ರಸ್ತೆಯಲ್ಲಿರುವ ಬಿಜೆಪಿ ಶಾಸಕಿ ರತ್ನಾ ದೇಬ್ನಾಥ್ ಅವರ ನಿವಾಸದ ಸಮೀಪವೇ ಈ ದಾಳಿ ನಡೆದಿದೆ. ಬಿಜೆಪಿ ಕಾರ್ಯಕರ್ತರು ಸ್ಥಳೀಯ ನಿವಾಸಿಗಳೊಂದಿಗೆ ಸಂವಹನ ನಡೆಸುತ್ತಿದ್ದ ಸಂದರ್ಭದಲ್ಲಿ ಮೋಟಾರ್ ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳ ಗುಂಪು ಕಚ್ಚಾ ಬಾಂಬ್‌ಗಳನ್ನು ಎಸೆದು ಪರಾರಿಯಾಗಿದೆ. ಈ ಸ್ಫೋಟದ ತೀವ್ರತೆಗೆ ಐವರು ಬಿಜೆಪಿ ಕಾರ್ಯಕರ್ತರು ರಕ್ತದ ಮಡುವಿನಲ್ಲಿ ಬಿದ್ದಿದ್ದು, ಅವರನ್ನು ತಕ್ಷಣವೇ ಕೋಲ್ಕತ್ತಾದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಾಂಬ್ ದಾಳಿಯು ಕೇವಲ ರಾಜಕೀಯ ಸಂಘರ್ಷವಲ್ಲ, ಬದಲಿಗೆ ಇದು ವ್ಯವಸ್ಥಿತ ಪೂರ್ವನಿಯೋಜಿತ ಸಂಚು ಎಂದು ಬಿಜೆಪಿ ಆರೋಪಿಸಿದೆ. ಸುವೇಂದು ಅಧಿಕಾರಿ ಅವರ ಆಪ್ತನ ಕೊಲೆಯಾದ ಬೆನ್ನಲ್ಲೇ ಜನಪ್ರತಿನಿಧಿಯಾದ ಶಾಸಕಿ ರತ್ನಾ ದೇಬ್ನಾಥ್ ಅವರ ಮನೆಯ ಬಳಿಯೇ ಸ್ಫೋಟ ಸಂಭವಿಸಿರುವುದು, ಪಕ್ಷದ ನಾಯಕರನ್ನು ಭಯಭೀತಗೊಳಿಸುವ ಪ್ರಯತ್ನ ಎಂದು ಬಿಜೆಪಿ ಕೆಂಡಕಾರಿದೆ. ಇದೇ ಪ್ರದೇಶದಲ್ಲಿ ಆರ್‌ಜಿ ಕಾರ್ ಆಸ್ಪತ್ರೆಯ ಅತ್ಯಾಚಾರ ಸಂತ್ರಸ್ತೆಯ ತಾಯಿಯ ನಿವಾಸವೂ ಇರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿದೆ.

ಘಟನೆಯ ನಂತರ ಪಾಣಿಹಟಿಯಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರೀ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ದಾಳಿಕೋರರಿಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಬೆಂಬಲವಿದೆ ಎಂದು ಕೇಸರಿ ಪಡೆ ನೇರ ಆರೋಪ ಮಾಡಿದ್ದರೆ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಈ ಆರೋಪವನ್ನು ತಳ್ಳಿಹಾಕಿದೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಶಾಸಕಿಯ ಮನೆಯ ಸುತ್ತಮುತ್ತ ಬಿಗಿ ಕಣ್ಗಾವಲು ಇರಿಸಲಾಗಿದೆ.