ಮಂಗಳೂರು: ನಗರದ ಕದ್ರಿ ಉದ್ಯಾನವನದ ಬಳಿ ಅಕ್ರಮವಾಗಿ ಚಿಪ್ಪು ಹಂದಿಯ ಚಿಪ್ಪುಗಳನ್ನು (Pangolin Scales) ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬೆಂಗಳೂರು ದಕ್ಷಿಣದ ಹೆಚ್.ಆರ್. ಜಗದೀಶ (50), ಕನಕಪುರದ ಸಿದ್ದು ನಾಯ್ಕ (38) ಮತ್ತು ಬೆಂಗಳೂರು ಬನಶಂಕರಿ 2ನೇ ಹಂತದ ನಿವಾಸಿ ಬಾಬು (48) ಎಂದು ಗುರುತಿಸಲಾಗಿದೆ.

ಮೇ5ರಂದು ಮಧ್ಯಾಹ್ನ ಸುಮಾರು 03.00 ಗಂಟೆಯ ಸುಮಾರಿಗೆ ಮಂಗಳೂರು ಕದ್ರಿ ಉದ್ಯಾನವನದ ಬಳಿ ಚಿಪ್ಪು ಹಂದಿಯ ಚಿಪ್ಪುಗಳನ್ನು ಮಾರಾಟ ಮಾಡಲು ಸಂಚು ರೂಪಿಸಲಾಗಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ತಂಡವು, KA 05 MS 1049 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಕಾರಿನಲ್ಲಿದ್ದ ಮೂವರು ಅಸಾಮಿಗಳನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಚಟುವಟಿಕೆ ದೃಢಪಟ್ಟಿದೆ.

ಕೂಡಲೇ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಮತ್ತು ಅವರ ಬಳಿಯಿದ್ದ ಸೊತ್ತನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಗಳಿಂದ ಸುಮಾರು 5.200 ಕಿ.ಗ್ರಾಂ ತೂಕದ ಚಿಪ್ಪು ಹಂದಿಯ ಚಿಪ್ಪುಗಳು ಮತ್ತು ಅಂದಾಜು 3 ಲಕ್ಷ ರೂಪಾಯಿ ಮೌಲ್ಯದ ಮಾರುತಿ ಸ್ವಿಫ್ಟ್ ಕಾರನ್ನು ಜಪ್ತಿ ಮಾಡಲಾಗಿದೆ.
ಈ ಕಾರ್ಯಾಚರಣೆಯು ಸಿ.ಐ.ಡಿ. ಅರಣ್ಯ ಘಟಕದ ಪೊಲೀಸ್ ಮಹಾನಿರೀಕ್ಷಕರು ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಪವನ್ ನೆಟ್ಟೂರು, ಐಪಿಎಸ್ ರವರ ಮಾರ್ಗದರ್ಶನದಲ್ಲಿ ನಡೆದಿದೆ.

ಕಾರ್ಯಾಚರಣೆಯಲ್ಲಿ ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕರಾದ ದಿಲೀಪ್ ಜಿ ಆರ್, ಸಿಬ್ಬಂದಿ ತಾರನಾಥ ಎಸ್ ಮತ್ತು ಅಬ್ದುಲ್ ರವೂಫ್ ಪಾಲ್ಗೊಂಡಿದ್ದರು. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಂತಹ ಅಕ್ರಮಗಳು ಕಂಡುಬಂದಲ್ಲಿ ಸಾರ್ವಜನಿಕರು ಮಡಿಕೇರಿ (9480800220) ಅಥವಾ ಮಂಗಳೂರು (8277949810) ಕಛೇರಿಗೆ ಮಾಹಿತಿ ನೀಡಲು ಕೋರಲಾಗಿದೆ.