ಬ್ರಹ್ಮಾಂಡದ ಅಂಚಿನಲ್ಲೊಂದು ವಿಸ್ಮಯಕಾರಿ ಪೆಡಂಭೂತ ಪತ್ತೆ!

ಪ್ಲೂಟೋ ಗ್ರಹದ ಕಕ್ಷೆಯನ್ನೂ ಮೀರಿ ಹೋದರೆ ಅಲ್ಲಿ ಸೂರ್ಯನ ಬೆಳಕೇ ತಲುಪದ, ಮೈ ಹೆಪ್ಪುಗಟ್ಟಿಸುವ ಕತ್ತಲ ಲೋಕವಿದೆ. ಅದನ್ನು ನಾವು ‘ಕೈಪರ್ ಬೆಲ್ಟ್’ ಎಂದು ಕರೆಯುತ್ತೇವೆ. ವಿಜ್ಞಾನಿಗಳ ಪ್ರಕಾರ ಅಲ್ಲಿರುವುದು ಬರೀ ಸತ್ತ ಹೋದ ಮಂಜಿನ ಗಡ್ಡೆಗಳು ಮಾತ್ರ. ಆದರೆ ಜಪಾನಿನ ಖಗೋಳ ವಿಜ್ಞಾನಿಗಳು ಇತ್ತೀಚೆಗೆ ಪತ್ತೆಹಚ್ಚಿರುವ ವಿಷಯವೊಂದು ಇಡೀ ವಿಜ್ಞಾನ ಲೋಕವನ್ನೇ ಬೆಚ್ಚಿ ಬೀಳಿಸಿದೆ. ಸೌರಮಂಡಲದ ಕೊನೆಯ ಅಂಚಿನಲ್ಲಿರುವ, ಜೀವವೇ ಇಲ್ಲದ ಒಂದು ಪುಟ್ಟ ಮಂಜುಗಡ್ಡೆಯ ಸುತ್ತ ತೆಳುವಾದ ವಾತಾವರಣವೊಂದು ಇರುವುದು ಪತ್ತೆಯಾಗಿದೆ!

(612533) 2002 XV93 ಎಂಬ ವಿಲಕ್ಷಣ ಹೆಸರಿನ ಈ ಕಲ್ಲುಬಂಡೆ ಅಥವಾ ಮಂಜುಗಡ್ಡೆ ಕೇವಲ 500 ಕಿಲೋಮೀಟರ್ ಅಗಲವಿದೆ. ನಿಸರ್ಗದ ನಿಯಮದ ಪ್ರಕಾರ, ಇಷ್ಟು ಸಣ್ಣ ಕಾಯಕ್ಕೆ ತನ್ನದೇ ಆದ ವಾತಾವರಣವನ್ನು ಹಿಡಿದಿಟ್ಟುಕೊಳ್ಳುವ ಗುರುತ್ವಾಕರ್ಷಣ ಶಕ್ತಿ ಇರುವುದಿಲ್ಲ. ಅತ್ತ ಪ್ಲೂಟೋ ಗ್ರಹವೇ ಗಾತ್ರದಲ್ಲಿ ಇದಕ್ಕಿಂತ ನಾಲ್ಕು ಪಟ್ಟು ದೊಡ್ಡದಿದೆ. ಹಾಗಿರುವಾಗ, ಈ ಪುಟ್ಟ ಬೆಣಚುಗಲ್ಲಿನಂತಹ ಪೆಂಡೆ ತನ್ನ ಸುತ್ತ ಗ್ಯಾಸ್‌ಗಳನ್ನು ಹೇಗೆ ಹಿಡಿದಿಟ್ಟುಕೊಂಡಿದೆ ಎಂಬುದು ವಿಜ್ಞಾನಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಈ ಸತ್ಯ ಬಯಲಾದದ್ದು ಒಂದು ರೋಚಕ ಪ್ರಸಂಗದ ಮೂಲಕ. 2024ರ ಜನವರಿಯಲ್ಲಿ ಈ ಮಂಜಿನ ಗಡ್ಡೆಯು ದೂರದ ನಕ್ಷತ್ರವೊಂದಕ್ಕೆ ಅಡ್ಡಲಾಗಿ ಹಾದುಹೋಯಿತು. ಜಪಾನಿನ ವಿಜ್ಞಾನಿಗಳು ಆ ನಕ್ಷತ್ರದ ಬೆಳಕನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಸಾಮಾನ್ಯವಾಗಿ ಇಂತಹ ಕಾಯಗಳು ಅಡ್ಡ ಬಂದಾಗ ನಕ್ಷತ್ರದ ಬೆಳಕು ಕೂಡಲೇ ಮಾಯವಾಗಬೇಕು. ಆದರೆ ಇಲ್ಲಿ ನಕ್ಷತ್ರದ ಬೆಳಕು ಒಮ್ಮಿಂದೊಮ್ಮೆಲೆ ಆರಿಹೋಗದೆ, ಸುಮಾರು ಒಂದೂವರೆ ಸೆಕೆಂಡುಗಳ ಕಾಲ ನಿಧಾನವಾಗಿ ಮಬ್ಬಾಗುತ್ತಾ ಹೋಯಿತು. ಅಂದರೆ, ಆ ಮಂಜಿನ ಗಡ್ಡೆಯ ಸುತ್ತ ತೆಳುವಾದ ಗಾಳಿಯ ಪದರವಿದ್ದು, ಅದು ನಕ್ಷತ್ರದ ಬೆಳಕನ್ನು ಬಗ್ಗಿಸಿತ್ತು!

ನಾಸಾದ ನ್ಯೂ ಹೊರೈಜನ್ ಮಿಷನ್‌ನ ಪ್ರಮುಖ ವಿಜ್ಞಾನಿ ಅಲನ್ ಸ್ಟರ್ನ್ ಹೇಳುವಂತೆ, ಇದು ನಿಜವೇ ಆಗಿದ್ದರೆ ಖಗೋಳ ವಿಜ್ಞಾನದ ಹಳೆಯ ಸಿದ್ಧಾಂತಗಳನ್ನೆಲ್ಲ ನಾವು ಬದಲಿಸಬೇಕಾಗುತ್ತದೆ. ಈಗ ಎಲ್ಲರ ಕಣ್ಣು ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕದ ಮೇಲಿದೆ. ಈ ದೈತ್ಯ ಕಣ್ಣು ಆ ಪುಟ್ಟ ಮಂಜಿನ ಲೋಕದತ್ತ ತಿರುಗಿದರೆ ಮಾತ್ರ ಅಲ್ಲಿರುವ ಗಾಳಿ ಎಂತಹುದು, ಆ ಕೊರೆಯುವ ಚಳಿಯಲ್ಲೂ ಅದು ಹೇಗೆ ಉಳಿದುಕೊಂಡಿದೆ ಎಂಬ ರಹಸ್ಯ ಬಯಲಾಗಲಿದೆ. ಸೌರಮಂಡಲದ ಅಂಚಿನಲ್ಲಿ ನಾವು ಕಲ್ಪಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಜೀವಂತಿಕೆ ಇರಬಹುದೇ ಎಂಬ ಕುತೂಹಲ ಈಗ ದಟ್ಟವಾಗಿದೆ.

error: Content is protected !!