ಕಾರ್ಕಳ: ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿ, ಅಣ್ಣ-ತಮ್ಮ ಎಂದು ಕರೆಸಿಕೊಂಡವರ ನಡುವೆ ಜಾಗದ ಕಿಚ್ಚು ಹತ್ತಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಕಾರ್ಕಳದ ಈ ಘಟನೆಯೇ ಸಾಕ್ಷಿ. ತಾಲೂಕಿನ ಮಿತ್ತಬೆಟ್ಟು ಹಿರಿಯಂಗಡಿಯಲ್ಲಿ ಸಣ್ಣದೊಂದು ಮನೆ ಮತ್ತು ಜಾಗದ ವಿಚಾರವಾಗಿ ಶುರುವಾದ ತಕರಾರು, ಶನಿವಾರ ರಾತ್ರಿ ಅಣ್ಣನ ಹೆಣ ಬೀಳುವಲ್ಲಿಗೆ ಹೋಗಿ ನಿಂತಿದೆ. ಮಣ್ಣಿನ ಮೇಲಿನ ವ್ಯಾಮೋಹಕ್ಕೆ ರಕ್ತ ಸಂಬಂಧವೇ ಬಲಿಯಾಗಿದೆ.

ಮೃತಪಟ್ಟ ವ್ಯಕ್ತಿಯನ್ನು 65 ವರ್ಷದ ರಿಚಾರ್ಡ್ ಡಿ’ಸೋಜಾ ಎಂದು ಗುರುತಿಸಲಾಗಿದೆ. ಹಂತಕ ಬೇರೆ ಯಾರೂ ಅಲ್ಲ, ಸ್ವಂತ ತಮ್ಮ ಹೆರಾಲ್ಡ್ ಡಿ’ಸೋಜಾ. ಮೇ 2ರ ಸಂಜೆ ಸುಮಾರು 6 ಗಂಟೆಗೆ ಅಣ್ತಮ್ಮನ ಮಧ್ಯೆ ಶುರುವಾದ ಸಣ್ಣ ಮಾತಿನ ಚಕಮಕಿ, ನೋಡನೋಡುತ್ತಿದ್ದಂತೆಯೇ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.

ಹೆರಾಲ್ಡ್ ಸಿಟ್ಟಿನ ಭರದಲ್ಲಿ ಅಲ್ಲೇ ಇದ್ದ ಮರದ ರೀಪಿನಿಂದ ಅಣ್ಣ ರಿಚಾರ್ಡ್ ಅವರಿಗೆ ಬಲವಾಗಿ ಬಾರಿಸಿದ್ದಾನೆ. ತಲೆಗೆ ತಗುಲಿದ ಭೀಕರ ಪೆಟ್ಟಿನಿಂದಾಗಿ ರಿಚಾರ್ಡ್ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ. ಮೃತರ ಪತ್ನಿ ಜೆಸಿಂತಾ ಡಿ’ಸೋಜಾ ಅವರು ರೋದಿಸುತ್ತಾ ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಘಟನೆ ನಡೆದ ಕೂಡಲೇ ಉಡುಪಿ ಎಸ್ಪಿ ಹರಿರಾಂ ಶಂಕರ್ ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತ್ತ ಅಣ್ಣನ ಶವ ಪೋಸ್ಟ್‌ಮಾರ್ಟಂಗೆ ಹೋಗಿದ್ದರೆ, ಇತ್ತ ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಹಂತಕ ತಮ್ಮ ಹೆರಾಲ್ಡ್‌ನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಜಾಗದ ಆಸೆಗೆ ಅಣ್ಣನನ್ನು ಕೊಂದ ಅತೃಪ್ತ ಆತ್ಮ ಈಗ ಜೈಲು ಕಂಬಿ ಎಣಿಸುತ್ತಿದೆ.
